ಕೊಚ್ಚಿ: ಕೇರಳದಲ್ಲಿ ಕೊರೊನಾ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಅತ್ಯಂತ ಅಪಾಯಕಾರಿಯಾದ ನಿಫಾ ವೈರಾಣು ಕೇರಳದಲ್ಲಿ ಪತ್ತೆಯಾಗಿದ್ದು, ಸೋಂಕಿಗೆ ತುತ್ತಾದ 12 ವರ್ಷದ ಬಾಲಕ ಭಾನುವಾರ ಸಾವನ್ನಪ್ಪಿದ್ದಾನೆ.
ಚಾಂತಮಂಗಳಮ್ ಪಂಚಾಯತ್ ವ್ಯಾಪ್ತಿಯ ಚುಳೂರ್ ನಿವಾಸಿಯಾಗಿರುವ ಸೋಂಕಿತ ಬಾಲಕನನ್ನು ಸೆಪ್ಟೆಂಬರ್ 1ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರದಿಗಳನ್ನು ಪುಣೆಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾಗಿದ್ದು ನಿಫಾ ಸೋಂಕು ಇರುವುದು ದೃಢಪಟ್ಟಿದೆ.
ಮೃತಪಟ್ಟ ಬಾಲಕನ ಮನೆಯಿರುವ ಪ್ರದೇಶದ ಸುತ್ತಮುತ್ತಲಿನ 3ಕಿಮೀ ವ್ಯಾಪ್ತಿಯಲ್ಲಿ 17 ಮಂದಿಯ ಮೇಲೆ ತೀವ್ರ ನಿಗಾವಹಿಸಿ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ.
ಕೇಂದ್ರದ ತಂಡ ಆಗಮನ:
ಕೇಂದ್ರದ ರೋಗ ನಿಯಂತ್ರಣ ತಜ್ಞರ ತಂಡ ಕೇರಳಕ್ಕೆ ದೌಢಾಯಿಸಿದ್ದು ಕೇರಳ ಸರಕಾರಕ್ಕೆ ತಾಂತ್ರಿಕ ಸಲಹೆಯನ್ನು ನೀಡಲಿದೆ. ಕೇರಳ ಸರಕಾರ ಉನ್ನತ ಮಟ್ಟದ ಸಭೆ ನಡೆಸಿದ್ದು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲು ಸಿದ್ಧತೆ ನಡೆಸಿದೆ. ಸುಮಾರು 4 ವಾರ್ಡ್ ಗಳನ್ನು ಆಂಶಿಕವಾಗಿ ಸೀಲ್ ಡೌನ್ ಮಾಡಲಾಗಿದೆ.
ಏನಿದು ನಿಫಾ ವೈರಸ್?
ನಿಫಾ ವೈರಸ್ ಬಾವಲಿ ಮತ್ತು ಹಂದಿಗಳಿಂದ ಮನುಷ್ಯರಿಗೆ ಹರಡಬಹುದು. ರೋಗವು ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿದ್ದು ಮತ್ತು ನಿಫಾಗೆ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಇಲ್ಲ.
ಏಷ್ಯಾ ಹಾಗೂ ಆಗ್ನೇಯ ಏಷ್ಯಾಗಳಲ್ಲಿ ಹೆಚ್ಚಾಗಿ ಕಾಣಸಿಗುವ ಬಾವಲಿಗಳ ಮೂಲಕ ನಿಫಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ. ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ನಿಫಾ ಹಳಸಿದ ಆಹಾರಗಳ ಮೂಲಕ, ವ್ಯಕ್ತಿಯಿಂದ ವ್ಯಕ್ತಿಗೆ ಕೂಡ ಹರಡುವ ಸಾಧ್ಯತೆಯಿದೆ.
ಈ ಹಿಂದೆ 2018 ಮತ್ತು 2019 ರಲ್ಲಿ ಕೇರಳದಲ್ಲಿ ನಿಫಾ ಸೋಂಕಿಗೆ 17 ಮಂದಿ ಮೃತಪಟ್ಟಿದ್ದರು.