ಮಂಗಳೂರು: 150 ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಅಭಿವೃದ್ಧಿಗೆ ಸರಕಾರದಿಂದ ವಿಶೇಷ ಅನುದಾನ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ಶನಿವಾರ ಕಾಲೇಜಿನಲ್ಲಿ ನಡೆದ ಕಾಲೇಜು ಅಭಿವೃದ್ಧಿ ಮಂಡಳಿ (ಸಿಡಿಸಿ) ಸಭೆಯಲ್ಲಿ ಮಾತನಾಡಿದ ಶಾಸಕರು, ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 70,000 ಕ್ಕೂ ಹೆಚ್ಚು ಪುಸ್ತಕಗಳಿರುವ ಕಾಲೇಜಿನ ಗ್ರಂಥಾಲಯವನ್ನು ಪುನರ್ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ವಿಶ್ವವಿದ್ಯಾನಿಲಯ ಕಾಲೇಜಿನ ಅಭಿವೃದ್ಧಿ, ಮೂಲಸೌಕರ್ಯ ಹಾಗೂ ಹೊಸ ಕೋರ್ಸ್ಗಳನ್ನು ಜಾರಿಗೊಳಿಸುವ ಕುರಿತಾಗಿ ಚರ್ಚೆ ನಡೆಸಲಾಯಿತು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಅವರೂ ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸುವ ಭರವಸೆ ನೀಡಿದರು.
ಸಭೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರಮೇಶ್, ರವಿಚಂದ್ರ ಪಿ.ಎನ್, ಸಿಡಿಸಿ ಸದಸ್ಯರುಗಳಾದ ಮುರಳೀಧರ ನಾಯಕ್, ಶಿಖಾರಿಪುರ ಕೃಷ್ಣಮೂರ್ತಿ, ಪ್ರಕಾಶ್ ನಾಯಕ್, ಹರ್ಷವರ್ಧನ ಗಟ್ಟಿ, ವಿಠಲ ಕುಡ್ವ ಮೊದಲಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ಅನಸೂಯ ರೈ ಅಧ್ಯಕ್ಷತೆ ವಹಿಸಿದ್ದರು. ಡಾ. ಹರೀಶ್ ಸ್ವಾಗತಿಸಿ, ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ಜಯವಂತ ನಾಯಕ್ ವಂದಿಸಿದರು.