ಉಡುಪಿ: ಉದ್ಯೋಗಸ್ಥ ಮಹಿಳೆಯರು ನಿರ್ಭೀತರಾಗಿ ಸುರಕ್ಷಿತ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಲು ಹಾಗೂ ಲೈಂಗಿಕ ಕಿರುಕುಳ ತಡೆಗೆ ಆಂತರಿಕ ದೂರು ಸಮಿತಿಗಳನ್ನು ಕಡ್ಡಾಯವಾಗಿ ರಚಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ) ಅಧಿನಿಯಮ-2013ರ ಜಿಲ್ಲಾ ಮಟ್ಟದ ಅಧಿಕಾರಗಳ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರಿ, ಖಾಸಗಿ ಕೈಗಾರಿಕೆಗಳು ಸೇರಿದಂತೆ ಇತರೆ ವಾಣಿಜ್ಯ ಸಂಸ್ಥೆಗಳಲ್ಲಿ ನಿರ್ವಹಿಸುವಾಗ 10 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ, ಆಂತರಿಕ ದೂರು ನಿರ್ವಹಣಾ ಸಮಿತಿಯನ್ನು ತಪ್ಪದೇ ರಚಿಸಬೇಕು. ಮಹಿಳೆಯರು ತಮ್ಮ ವೃತ್ತಿ ನಿರ್ವಹಿಸುವ ಸ್ವ-ಉದ್ಯೋಗಿಗಳಿಂದ ಲೈಂಗಿಕ ಕಿರುಕುಳಗಳು ಉಂಟಾದಲ್ಲಿ ಸಂತ್ರಸ್ಥೆಯ ಸಮಿತಿಗೆ ದೂರನ್ನು ನೀಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳವುದರ ಜೊತೆಗೆ ತಮಗಾದ ಅನ್ಯಾಯದ ಬಗ್ಗೆ ನ್ಯಾಯ ಒದಗಿಸಿಕೊಳ್ಳಬೇಕು ಎಂದರು.
ಕೆಲಸದ ಸ್ಥಳಗಳಲ್ಲಿ ಮಹಿಳೆಯ ಲೈಂಗಿಕ ಕಿರುಕುಳ ಅಧಿನಿಯಮ-2013 ಜಾರಿಗೆ ಬಂದರೂ ಹಲವಾರು ವರ್ಷಗಳಾದರೂ ಅವುಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ. ಕೆಲವು ಕಚೇರಿಗಳಲ್ಲಿ ದೂರು ನಿರ್ವಹಣಾ ಸಮಿತಿಯು ರಚನೆಯಾಗದೇ ಇರುವುದು ಕಂಡು ಬಂದಿದೆ ಎಂದ ಅವರು ಶೀಘ್ರದಲ್ಲಿಯೇ ಸಮಿತಿಗಳ್ನುö ರಚಿಸುವುದರೊಂದಿಗೆ ಮಹಿಳೆಯರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕೆಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾರವರು ಪ್ರಸ್ತಾವಿಕವಾಗಿ ಮಾತನಾಡಿ, ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನೀಡಿದ್ದಲ್ಲಿ ಐಪಿಸಿ ಕಲಂ 509 ರ ಅಡಿ ಅಪರಾಧಿಗೆ 3 ವರ್ಷಗಳ ಕಾಲ ಜೈಲು ಶಿಕ್ಷೆ ಜೊತೆ ದಂಡ ವಿಧಿಸಲಾಗುತ್ತದೆ. ಹಾಗೇ ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸುವ ಅಪರಾಧಕ್ಕೆ ಕ್ರಿಮಿನಲ್ ಕಾನೂನು ಕಾಯ್ದೆಯಡಿ 1 ರಿಂದ 5 ವರ್ಷಗಳ ಜೈಲು ಹಾಗೂ ದಂಡ ವಿಧಿಸಲಾಗುತ್ತದೆ ಎಂದ ಅವರು ಮಹಿಳೆಯರಿಗೆ ಅಶ್ಲೀಲ ಚಿತ್ರಗಳನ್ನು ಹಾಗೂ ಮೆಸೇಜ್ ಕಳುಹಿಸುವುದು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.
ಮಹಿಳೆಯರು ಉದ್ಯೋಗ ನಿರ್ವಹಿಸುವ ಕಚೇರಿ ಅಥವಾ ಸಂಸ್ಥೆಗಳಲ್ಲಿ ಅನುಚಿತವಾಗಿ ವರ್ತಿಸುವುದು, ಅಸಹ್ಯಕಾರವಾದ ಕಾಮೆಂಟ್‌ಗಳನ್ನು ಮಾಡುವುದು ಲೈಂಗಿಕ ದೌರ್ಜನ್ಯವೆನಿಸಿಕೊಳ್ಳುತ್ತದೆ ಎಂದ ಅವರು, ನಮ್ಮ ದೇಶದಲ್ಲಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಎಂಬ ವಿಶೇಷವಾದ ಕಾನೂನು ಪ್ರಬಲ ಹೊಂದಿದ್ದರೂ ಸಹ ಲೈಂಗಿಕ ಕಿರುಕುಳ ಕೃತ್ಯಗಳು ಕೇಳಿಬರುತ್ತಿದೆ ಎಂದರು.
ನ್ಯಾಯವಾದಿ ರೇಖಾ ಹೆಗ್ಡೆ ‘ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆಗಟ್ಟುವಿಕೆ’, ಎಂಬ ವಿಷಯದ ಕುರಿತ ಉಪನ್ಯಾಸವನ್ನು ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಕಿರಣ್ ಫಡ್ನೇಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ಶೇಷಪ್ಪ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.