ಮಂಗಳೂರು: ರಿಲಯನ್ಸ್ ಫೌಂಡೇಶನ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಸಹಯೋಗದೊಂದಿಗೆ ವಿದ್ಯಾರ್ಥಿಗಳು ತಮ್ಮ ವೃತ್ತಿ ಮತ್ತು ವಯಕ್ತಿಕ ಜೀವನವನ್ನು ರೂಪಿಸಿಕೊಳ್ಳುವದು ಹೇಗೆ ಎಂಬ ವಿಷಯದ ಕುರಿತು ಕಾರ್ಯಕ್ರಮ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ಪೌಲ್ ಜಿ. ಆಕ್ವಿನಾಸ್ ರವರು, ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯದ ಆಧಾರದ ಮೇಲೆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು, ಹೊರತು ಬೇರೆಯವರ ಒತ್ತಾಸೆಯ ಮೇರೆಗೆ ಅಲ್ಲ. ಉತ್ತಮ ವೃತ್ತಿ ಕೌಶಲ್ಯಗಳನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಮೈಗೂಡಿಸಿಕೊಂಡರೆ ಯಶಸ್ಸಿನ ದಾರಿ ಸುಲಭವಾಗುವುದು ಎಂದರು.
ಕಾರ್ಯಕ್ರಮ ಆಯೋಜನೆ ಮಾಡಿದ ರಿಲಯನ್ಸ್ ಫೌಂಡೇಶನ್ ಅಧಿಕಾರಿ ಮಂಜುನಾಥ ಮೊಕಾಶಿ ಮಾತನಾಡುತ್ತಾ, ರಿಲಯನ್ಸ್ ಫೌಂಡೇಶನ್ ಒಂದು ಲಾಭದಾಯಕವಲ್ಲದ ಸಂಸ್ಥೆಯಾಗಿದ್ದು ಕೃಷಿ, ಮೀನುಗಾರಿಕೆ, ಗ್ರಾಮೀಣ ಅಭಿವೃದ್ದಿ, ಆರೋಗ್ಯ, ಶಿಕ್ಷಣ, ವಿಪತ್ತು ನಿರ್ವಹಣೆ ಮುಂತಾದ ಸಾಮಾಜಿಕ ಕಾರ್ಯಗಳನ್ನು ಸ್ವಯಂಪ್ರೇರಿತವಾಗಿ ದೇಶದಾದ್ಯಂತ ಮಾಡುತ್ತಿದೆ ಎಂದು ಹೇಳಿದರು. ರಾಜ್ಯದ ಹಲವಾರು ಕಡೆಗಳಿಂದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ವರ್ಚುವಲ್ ಮಾಧ್ಯಮದ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.