ಬ್ರಹ್ಮಾವರ: ಬಿಲ್ಲಾಡಿ ಜಾನುವಾರುಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಿದ್ದ ಪ್ರಿಂಟರ್ ಅನ್ನು ಹಳೆ ವಿದ್ಯಾರ್ಥಿಗಳಾದ ರಾಘವೇಂದ್ರ ಶೆಟ್ಟಿ, ಸಭೆ ಸಮಾರಂಭಗಳಿಗೆ ಅಗತ್ಯವಿದ್ದ 50 ಕುರ್ಚಿಗಳನ್ನು ಸುಬ್ರಹ್ಮಣ್ಯ ಆಚಾರ್ಯ ಹಾಗೂ ಸಹೋದರಿಯರು, ಹಾಗೂ ಶಾಲಾ ಮಕ್ಕಳಿಗೆ ಅಗತ್ಯವಿದ್ದ ನೋಟ್ ಪುಸ್ತಕಗಳನ್ನು ನಿವ್ತತ್ತ ಶಿಕ್ಷಕಿ ನಾಗು ಜಿ ಕೋಟ್ಯಾನ್ ಹಾಗೂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅಂಗಡಿಮಕ್ಕಿ ನೀಡಿದರು. ದಾನಿಗಳನ್ನು ಶಾಲೆಯ ಹಾಗೂ ಊರವರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಕಾಲಘಟ್ಟದಲ್ಲಿ 110ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಜಾನುವಾರು ಕಟ್ಟೆ ಶಾಲೆ ಅತಿಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಜಿಲ್ಲೆಯ ಕೆಲವೇ ಕಲವು ಪ್ರಾಥಮಿಕ ಶಾಲೆಗಳಲ್ಲಿ ಒಂದು. ಹಾಗೆಯೇ ಪ್ರಸ್ತುತ 97 ವರ್ಷಗಳನ್ನು ಪೂರೈಸಿ ಶತಮಾನೋತ್ಸವದ ಹೊಸ್ತಿಲಲ್ಲಿದ್ದು ಮುಂದಿನ ದಿನಗಳಲ್ಲಿ ಶಾಸಕರು, ಹಳೆ ವಿದ್ಯಾರ್ಥಿಗಳು, ಎಸ್.ಡಿ.ಎಮ್.ಸಿ., ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಶೀಘ್ರದಲ್ಲೇ ಶತಮಾನೋತ್ಸವ ಸಮಿತಿ ರಚಿಸಿ ಜಿಲ್ಲೆಯಲ್ಲೇ ಮಾದರಿ ಸರ್ಕಾರಿ ಶಾಲೆ ಮಾಡುವ ಕುರಿತು ರೂಪುರೇಷೆ ರಚಿಸಲಾಗುವುದು ಎಂದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ನೈಲಾಡಿ, ಬಿ ಆರ್ ಪಿ ಚಂದ್ರಶೇಖರ ಶೆಟ್ಟಿ, ನಿವೃತ್ತ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಮಕೃಷ್ಣ ನಾಯ್ಕ್, ಪ್ರೇಮಾವತಿ ಶೆಟ್ಟಿ, ಕುಸುಮಾ ಆಚಾರ್ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಸದಾಶಿವ ಕೆ ಸ್ವಾಗತಿಸಿ, ಸಹಶಿಕ್ಷಕಿ ಸುಧಾ ಕೆ ವಂದಿಸಿದರು. ಶಿಕ್ಷಕ ಗಣೇಶ್ ಮಡಿವಾಳ ಕಾರ್ಯಕ್ರಮ ನಿರೂಪಿಸಿದರು.