ಉಡುಪಿ: ದೇಶ ವಿಭಜನೆಗೆ ಕುಮ್ಮಕ್ಕು ನೀಡಿದ ಕಾಂಗ್ರೆಸ್ ನಾಯಕರ ಸಹಿತ ಒಂದೇ ಕುಟುಂಬದ ವೈಭವೀಕರಣ ಮತ್ತು ನಿರಂತರ ಭ್ರಷ್ಟಾಚಾರದ ಮೂಲಕ ಸುದೀರ್ಘ ಅವಧಿಗೆ ದುರಾಡಳಿತ ನಡೆಸಿ ದೇಶದ ಅಸ್ಮಿತೆಯನ್ನು ಪ್ರಪಾತಕ್ಕೆ ತಳ್ಳಿರುವ ಕುಖ್ಯಾತಿಗೆ ಪಾತ್ರವಾಗಿರುವ, ಜಾಮೀನು ಪಡೆದು ತಿರುಗುತ್ತಿರುವ ವರಿಷ್ಠ ನಾಯಕರ ಪಕ್ಷ ಕಾಂಗ್ರೆಸ್‍ನಿಂದ ಬಿಜೆಪಿಗೆ ನೈತಿಕತೆಯ ಪಾಠ ಅನಗತ್ಯ ಎಂದು ಉಡುಪಿ ಜಿಲ್ಲಾ ಬಿಜೆಪಿ ಹೇಳಿದೆ.
ಭ್ರಷ್ಟಾಚಾರದ ಮೂಲಕ ಬಿಜೆಪಿಗೆ ಅಧಿಕಾರ ಎಂಬ ಶೀರ್ಷಿಕೆಯಡಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೀಡಿರುವ ಪತ್ರಿಕಾ ಹೇಳಿಕೆಯನ್ನು ಉಡುಪಿ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ. ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ವಿಚಾರ ಕಾಂಗ್ರೆಸ್‍ನ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಂತಿದೆ. ದೇಶದ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸನ್ನು ವಿಸರ್ಜಿಸಬೇಕೆಂಬ ಮಹಾತ್ಮಾ ಗಾಂಧಿ ಮಾತನ್ನೇ ನಡೆಸಿಕೊಡದ ಕಾಂಗ್ರೆಸ್ ಸಾಚಾತನದ ಮಾತನ್ನಾಡುತ್ತಿರುವುದು ವಿಪರ್ಯಾಸ.
ಕಾಂಗ್ರೆಸ್ ರಾಷ್ಟ್ರೀಯ ಸಮಿತಿಯ ನಿರ್ಣಯದಂತೆ ಅಂದು ನಡೆದ ದೇಶದ ಪ್ರಥಮ ಪ್ರಧಾನಿ ಅಭ್ಯರ್ಥಿ ಚುನಾವಣೆಯಲ್ಲಿ ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಾಭಾಯಿ ಪಠೇಲ್ ಅತಿ ಹೆಚ್ಚು ಮತಗಳನ್ನು ಪಡೆದು ಬಹುಮತ ಪಡೆದಿದ್ದರೂ, ಕನಿಷ್ಠ ಮತ ಪಡೆದ ಜವಾಹರಲಾಲ್ ನೆಹರೂ ಹಿಂಬಾಗಿಲಿನಿಂದ ಪ್ರಧಾನಿಯಾಗಿರುವುದು ದೇಶದ ಕರಾಳ ಇತಿಹಾಸವಾಗಿದೆ. ದೇಶದ ಸನಾತನ ಸಂಸ್ಕೃತಿ ವೈಭವಗಳನ್ನು ಮರೆಮಾಚುವ ಪ್ರಯತ್ನದ ಜೊತೆಗೆ ಹಿಂದೂ ವಿರೋಧಿ ನೀತಿ, ನೈಜ ಸ್ವಾತಂತ್ರ್ಯ ಹೋರಾಟಗಾರ ಅಪಮಾನ, ಸರಣಿ ಭ್ರಷ್ಟಾಚಾರಕ್ಕೆ ನಾಂದಿ ಹಾಡಿರುವುದು ಇವೆಲ್ಲವೂ ಕಾಂಗ್ರೆಸ್ ಸಾಧನೆಯಾಗಿದೆ. ನಕಲಿ ಗಾಂಧಿ ಕುಟುಂಬಕ್ಕೆ ಬಹುಪರಾಕ್ ಹೇಳುವ ಮೂಲಕ ಗುಲಾಮಿ ಮನಸ್ಥಿತಿಯನ್ನು ಮೇಳೈಸುತ್ತಿರುವ ಕಾಂಗ್ರೆಸ್‍ನಿಂದ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವೆನಿಸಿದ ಬಿಜೆಪಿಗೆ ನೈತಿಕತೆಯ ಪಾಠದ ಅಗತ್ಯವಿಲ್ಲ ಎಂದು ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ ತಿಳಿಸಿದ್ದಾರೆ.
ಜಗತ್ತಿನ ಪ್ರಚಲಿತ ವಿದ್ಯಮಾನಗಳ ಎಲ್ಲ ಮಾಹಿತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬೆರಳ ತುದಿಯಲ್ಲಿ ಲಭ್ಯವಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಭ್ರಷ್ಟಾಚಾರಕ್ಕೆ ಪರ್ಯಾಯ ಪದವೆಂಬಂತಿರುವ ಕಾಂಗ್ರೆಸ್‍ನ ಸಾಚಾತನದ ಹೇಳಿಕೆ ಹಾಸ್ಯಾಸ್ಪದವೆನಿಸಿದೆ. ದೇಶದ ಸ್ವಾತಂತ್ರ್ಯಾ ನಂತರದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ನಡೆದ ಜೀಪ್ ಹಗರಣ, 2ಜಿ ಸ್ಪೆಕ್ಟ್ರಮ್, ಬೋಫೋರ್ಸ್, ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್, ನ್ಯಾಷನಲ್ ಹೆರಾಲ್ಡ್, ಸ್ಕೋರ್ಪಿನ್ ಸಬ್ ಮೆರೇನ್, ಶಾರದಾ ಚಿಟ್ ಫಂಡ್, ಸತ್ಯಂ, ಕಾಮನ್ ವೆಲ್ತ್ ಗೇಮ್, ಕಲ್ಲಿದ್ದಲು ಹಗರಣ ಮುಂತಾದ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಲೂಟಿ ಮಾಡಿರುವ ನೂರಾರು ಹಗರಣಗಳಲ್ಲಿ ಕಾಂಗ್ರೆಸ್‍ನ ಉನ್ನತ ನಾಯಕರು ಸಿಲುಕಿದ್ದು, ಇನ್ನೂ ಹಲವಾರು ಹಗರಣಗಳ ತನಿಖೆ ಪ್ರಗತಿಯಲ್ಲಿರುವುದು ಕಾಂಗ್ರೆಸ್‍ಗೆ ಭೂಷಣವೆನಿಸಿದೆಯೆ?
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಹಗರಣ ರಹಿತ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಮತ್ತು ಜನಪರ ಸ್ವಚ್ಛ ಪಾರದರ್ಶಕ ಆಡಳಿತ ನೀಡುತ್ತಿರುವುದು ವಿಶ್ವಕ್ಕೇ ಮಾದರಿ ಎನಿಸಿದೆ. ಇವೆಲ್ಲವನ್ನೂ ಅರಗಿಸಿಕೊಳ್ಳಲಾಗದ ಭ್ರಷ್ಟ ಕಾಂಗ್ರೆಸ್ ದೇಶದೆಲ್ಲೆಡೆ ಜನತೆಯಿಂದ ತಿರಸ್ಕೃತಗೊಂಡಿದ್ದರೂ ಕೇವಲ ಅಸ್ತಿತ್ವಕ್ಕಾಗಿ ಬಿಜೆಪಿ ವಿರುದ್ಧ ನಿರಂತರ ಅಪಪ್ರಚಾರದಲ್ಲಿ ತೊಡಗಿರುವುದು ಜಗಜ್ಜಾಹೀರಾಗಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರಕಾರಗಳ ಜನಪರ ಆಡಳಿತ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ಪಳಗಿ ಸಂಘಟನಾತ್ಮಕವಾಗಿ ಪಕ್ಷವನ್ನು ರಾಜ್ಯಾದ್ಯಂತ ಸದೃಢಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಯಶಸ್ಸಿನ ನಾಗಾಲೋಟದಿಂದ ಕಂಗೆಟ್ಟಿರುವ ಕಾಂಗೆಸ್ ವೃಥಾ ಆರೋಪದಲ್ಲಿ ತೊಡಗಿರುವುದು ಹತಾಶ ಮನೋಭಾವದ ಪ್ರತೀಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ನಾಯಕರ ಬಗ್ಗೆ ಲಂಗು ಲಗಾಮಿಲ್ಲದೆ ನಾಲಗೆ ಹರಿಯಬಿಡುತ್ತಿರುವ ಮತ್ತು ಹಗರಣಗಳ ದೊರೆಗಳೆನಿಸಿ ಜೈಲುವಾಸ ಅನುಭವಿಸಿರುವ ಕಾಂಗ್ರೆಸ್ ನಾಯಕರ ಸಾಚಾತನದ ಬಗ್ಗೆಯೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಗುರುಪ್ರಸಾದ್ ಶೆಟ್ಟಿ ಕಟಪಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.