ಉಡುಪಿ: ಪಕ್ಷದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಸದಾ ಕಾಂಗ್ರೆಸ್ ನಾಯಕರ ವಿರುದ್ಧ ಮಾತನಾಡುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತನ್ನ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಹೇಗೆ ಬಂತು ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ. ಭ್ರಷ್ಟಾಚಾರದ ಮೂಲಕವೇ ಸರಕಾರ ರಚಿಸಿ ಅಧಿಕಾರಕ್ಕೆ ಬಂದವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.
ಪ್ರಧಾನಿ ಹುದ್ದೆ ಅಲಂಕರಿಸಿ ತಮ್ಮ ರಾಜನೀತಿಜ್ಞತೆ ಮತ್ತು ರಾಜಧರ್ಮದ ತಳಹದಿಯ ಪರಿಶುದ್ಧ ಆಡಳಿತದ ಮೂಲಕ ಈ ದೇಶದ ಸಮಗ್ರತೆ ಮತ್ತ ಸಾರ್ವಭೌಮತೆಯನ್ನು ಎತ್ತಿ ಹಿಡಿದು ಈ ಮಣ್ಣಿನ ಸರ್ವಾಂಗೀಣ ಅಭಿವೃದ್ಧಿಗಾಗಿ ದುಡಿದು ಮಡಿದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಸೇರಿ ಕಳೆದ 60 ವರ್ಷ ಈ ದೇಶವನ್ನಾಳಿದ ಕಾಂಗ್ರೆಸ್ಸಿನ ಯಾವುದೇ ಪ್ರಧಾನ ಮಂತ್ರಿಗಳನ್ನಾಗಲಿ, ನಾಯಕರನ್ನಾಗಲಿ, ಕನಿಷ್ಠ ಒಬ್ಬ ಕಾರ್ಯಕರ್ತನನ್ನಾಗಲಿ ಠೀಕಿಸುವ ಯೋಗ್ಯತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗಿಲ್ಲ. ಇತಿಹಾಸ ಅರಿಯದವರು ಇತಿಹಾಸ ಕೆದಕುವುದು ಬೇಡ ಎಂದು ಹೇಳಿದೆ.
ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಬೊಫೋರ್ಸ್, 2ಜಿ ಸ್ಪೆಕ್ಟ್ರಮ್, ಕಲ್ಲಿದ್ದಲು ಪ್ರಕರಣವೂ ಸೇರಿ ಹಲವು ಹಗರಣಗಳನ್ನು ಸೃಷ್ಟಿಸಿ, ಕಾಂಗ್ರೆಸ್ ಪಕ್ಷದ ಮೇಲೆ ಗೂಬೆ ಕೂರಿಸಿ ಅಂದಿನ ಪ್ರಧಾನ ಮಂತ್ರಿಗಳನ್ನು ಹಣಿಯಲು ನೋಡಿ ಅದರಲ್ಲಿ ಯಶಸ್ವಿಯಾಗದೆ, ಕಾಂಗ್ರೆಸ್ ಅಪರಾಧ ಮುಕ್ತವಾಗಿದ್ ಪುಟಕ್ಕಿಟ್ಟ ಚಿನ್ನದಂತೆ ಎದ್ದು ಬಂದಿರುವುದು ಈಗ ಇತಿಹಾಸ.
ಬಹುಶಃ ಆ ಬಗ್ಗೆ ಅರಿವಿಲ್ಲದ, ಇದ್ದರೂ ಇಲ್ಲದಂತೆ ನಟಿಸುತ್ತಿರುವ ಬಿಜೆಪಿ ರಾಜ್ಯಾದ್ಯಕ್ಷರು ಕಾಂಗ್ರೆಸ್ ನಾಯಕರನ್ನು ಠೀಕಿಸುವ ಮೊದಲು ತನ್ನ ಪಕ್ಷದ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ರಫೇಲ್ ಡೀಲ್, ಬಹುಕೋಟಿ ಕಮಿಷನ್ ಹಗರಣ, ಭೂ ಹಗರಣ ಸೇರಿದಂತೆ ಅನೇಕ ಹಗರಣಗಳಲ್ಲಿ ಜೈಲಿಗೆ ಹೋಗಿ ಬಂದ ತನ್ನವರ ಬಗ್ಗೆ ಹಾಗೂ ತನ್ನ ಪಕ್ಷದ ಸಾಚಾತನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.