2020ರ ರಾಷ್ಟೀಯ ಶಿಕ್ಷಣ ನೀತಿ ಪ್ರಥಮವಾಗಿ ಕರ್ನಾಟಕದಲ್ಲಿ ಅನುಷ್ಠಾನಗೊಂಡಿದೆ ಅನ್ನುವ ಕೀರ್ತಿ ನಮ್ಮ ರಾಜ್ಯಕ್ಕೆ ಸಂದಾಯವಾಗಿರುವುದು ಸಂತಸದ ಸುದ್ದಿ. ಈ ಅನುಷ್ಠಾನದ ಸೋಲು ಗೆಲುವುಗಳ ಪರಿಚಯವಾಗಬೇಕಾದದ್ದು ಮುಂದಿನ ಶೈಕ್ಷಣಿಕ ವರುಷಗಳಲ್ಲಿ ಅನ್ನುವುದು ಅಷ್ಟೇ ಸತ್ಯ.
ಹೊಸ ಶಿಕ್ಷಣ ನೀತಿಯ ಮುಂದಿರುವ ಸವಾಲುಗಳೇನು?
ಮೊದಲು ಬುಡಕ್ಕೆ ನೀರು ಎರೆಯಬೇಕೋ? ಅಥವಾ ತಲೆಗೆ ನೀರು ಎರೆಯಬೇಕೋ? ಅನ್ನುವ ಪ್ರಶ್ನೆ ನಮ್ಮನ್ನು ಕಾಡುತ್ತಿದೆ. ಈಗ ನಮ್ಮ ರಾಜ್ಯದಲ್ಲಿ ಮೊದಲಿಗೆ ತಲೆಗೆ ನೀರು ಎರೆಯುವ ಕೆಲಸ ಆಗಿದೆ. ಅಂದರೆ ಕಾಲೇಜು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಹೊಸ ಶಿಕ್ಷಣ ನೀತಿ ಹೇಗಿರಬೇಕು ಅನ್ನುವ ಸಂಗೋಷ್ಠಿಗಳು ನಡೆದು ಹೊಸ ಶಿಕ್ಷಣ ನೀತಿಗೆ ಸುಂದರ ಪದಗಳ ಉದ್ಘೋಷದೊಂದಿಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಆದರೆ ಶಿಕ್ಷಣದ ಮೂಲ ತಳಗಟ್ಟಾದ ಪ್ರಾಥಮಿಕ ಪ್ರೌಡ ಶಿಕ್ಷಣದ ಬಗ್ಗೆ ಯಾವ ಚಿಂತನ ಮಂಥನಗಳು ಸದ್ಯಕ್ಕೆ ನಡೆದ ಹಾಗೆ ಕಾಣುವುದಿಲ್ಲ.
ಪ್ರಾಥಮಿಕ ಶಿಕ್ಷಣದ ಬುಡ ಗಟ್ಟಿ ಮಾಡದೇ ಉನ್ನತ ಶಿಕ್ಷಣಕ್ಕೆ ನೀವೆಷ್ಟು ನೀರೆರೆದರೂ ಅದು ವ್ಯರ್ಥ. ಅದು ಹಿಂದಿನ ಎಲ್ಲಾ ಶೈಕ್ಷಣಿಕ ಪ್ರಯೋಗಗಳಲ್ಲಿ ಸ್ವಷ್ಟವಾಗಿ ನಮ್ಮ ಅನುಭವಕ್ಕೆ ಬಂದಿದೆ. ಕೇಂದ್ರ ರಾಜ್ಯ ಸರಕಾರಗಳಿಂದ ಉನ್ನತ ಶಿಕ್ಷಣಕ್ಕೆ ಹರಿದು ಬರುವಷ್ಟು ಚಿಂತನೆಗಳಾಗಲಿ ಸಂಗೋಷ್ಠಿಗಳಾಗಲಿ ಹಣಕಾಸಿನ ನೆರವು ಪ್ರಾಥಮಿಕ ಶಿಕ್ಷಣಕ್ಕೆ ಹರಿದು ಬರಲೇ ಇಲ್ಲ. ಇದರ ವಿಪರ್ಯಾಸ ಎಲ್ಲಿಯತನಕವಿದೆ ಅಂದರೆ ಉನ್ನತ ಶಿಕ್ಷಣದಲ್ಲಿ ಒಬ್ಬ ಉಪನ್ಯಾಸಕನ ಸಂಶೋಧನೆ ಪ್ರಾಜೆಕ್ಟ್ ಗಳು ಸೆಮಿನಾರು ಮುಂತಾದ ಶೈಕ್ಷಣಿಕ ಕಾರ್ಯಗಳಿಗೆ ವಿನಿಯೋಗಿಸುವ ಹಣ ನಮ್ಮೂರಿನ ಒಂದು ಸರಕಾರಿ ಶಾಲೆಯ ಮೇಲೆ ವಿನಿಯೋಗಿಸಲು ಸರಕಾರ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಇನ್ನೂ ಇದೆ ಅನ್ನುವಾಗ ಶಿಕ್ಷಣದ ಸುಧಾರಣೆ ಬದಲಾವಣೆ ಎಲ್ಲಿಂದ ಪ್ರಾರಂಭಿಸಬೇಕು.? ನೀವೇ ಆಲೋಚನೆ ಮಾಡಿ.
ನಮ್ಮ ಶಿಕ್ಷಣದ ಬದಲಾವಣೆ ಸುಧಾರಣೆಗಳ ನೀತಿಗಳ ಅನುಷ್ಠಾನ ಹೇಗಿದೆ ಅಂದರೆ -ನೀವೊಂದು ಮನೆಯ ಮುಂದೆ ತೆಂಗಿನ ಮರವನ್ನು ನೆಟ್ಟು ಅದರ ಬುಡಕ್ಕೆ ನೀರು ಗೊಬ್ಬರ ಹಾಕದೇ, ಅದು ಬುಡ ಉರಿದ ಕಾರಣಕ್ಕೆ ತಾನಾಗಿಯೇ ತೆವಳಿಕೊಂಡು ಕೊರಗಿ ಸೊರಗಿ ಆಕಾಶಕ್ಕೆ ತಲೆ ಮಾಡಿಕೊಂಡು ’ನಿಲ್ಲಿ ಮೋಡಗಳೆ ಎರಡು ಹನಿಯ ಚೆಲ್ಲ” ಅನ್ನುವ ಸ್ಥಿತಿಯಲ್ಲಿ ಮರ ನಿಂತಿರುತ್ತದೆ. ಈ ಹೊತ್ತಿಗೆ ಇದನ್ನು ನೆಟ್ಟ ಯಾಜಮಾನನಿಗೆ ಜ್ಞಾನೋದಯವಾಗಲೂ ಪ್ರಾರಂಭವಾಗುತ್ತದೆ.ಈಗಲೇ ಈ ಮರಕ್ಕೆ ನೀರು ಗೊಬ್ಬರ ಹಾಕಿದರೆ ಕಲ್ಪವೃಕ್ಷವಾಗಬಹುದು.
ಈಗ ನೀವು ಆಲೋಚಿಸಿ, ಈ ಕಲ್ಪವೃಕ್ಷದಿಂದ ನೀವೇನು ನಿರೀಕ್ಷೆ ಮಾಡಬಹುದು. ಇಂತಹ ಪರಿಸ್ಥಿತಿ ನಮ್ಮ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣಕ್ಕೆ ಬರಬಾರದಲ್ವ? ಹಾಗಾದರೆ ಶಿಕ್ಷಣ ಎಂಬ ಕಲ್ಪವೃಕ್ಷಕ್ಕೆ ಮೊದಲು ಎಲ್ಲಿ ನೀರು ಉಣ್ಣಿಸಬೇಕೆಂದು ನೀವೇ ಹೇಳಿ.
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ