ಲಕ್ನೌ: ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಶನಿವಾರ ವಿಧಿವಶರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.
ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರನ್ನು ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಜುಲೈ 4 ರಂದು ದಾಖಲಿಸಲಾಗಿತ್ತು. ರಾಜಸ್ಥಾನದ ರಾಜ್ಯಪಾಲರಾಗಿ ಕೂಡ ಕಲ್ಯಾಣ್ ಸಿಂಗ್ ಸೇವೆ ಸಲ್ಲಿಸಿದ್ದರು. ಬಹು ಅಂಗಾಂಗ ವೈಫಲ್ಯದಿಂದ ಅವರು ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಅಧಿಕೃತ ಬುಲೆಟಿನ್ ತಿಳಿಸಿದೆ.
ಕಲ್ಯಾಣ್ ಸಿಂಗ್ ಭಾರತೀಯ ಸಂಸ್ಕೃತಿ ಹಾಗೂ ಮೌಲ್ಯಗಳನ್ನು ಸದಾಕಾಲ ಎತ್ತಿ ಹಿಡಿದಿದ್ದರು. ತಳಮಟ್ಟದ ನಾಯಕರಾಗಿದ್ದ ಕಲ್ಯಾಣ್ ಸಿಂಗ್ ಒಬ್ಬ ಉತ್ತಮ ಆಡಳಿತಗಾರರಾಗಿದ್ದರು. ಉತ್ತರ ಪ್ರದೇಶದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಧೀಮಂತ ನಾಯಕನನ್ನು ಕಳೆದುಕೊಂಡಿದ್ದೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಲ್ಯಾಣ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಬಾಲ್ಯದಿಂದಲೇ ಆರ್.ಎಸ್.ಎಸ್. ಸ್ವಯಂಸೇವಕರಾಗಿದ್ದ ಕಲ್ಯಾಣ್ ಸಿಂಗ್, 1967 ರಲ್ಲಿ ಮೊಟ್ಟಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆ ಪ್ರವೇಶಿಸಿದ್ದರು. ಹತ್ತು ಬಾರಿ ನಡೆದ ವಿಧಾನಸಭೆ ಚುನಾವಣೆಗಳ ಪೈಕಿ 9 ರಲ್ಲಿ ಕಲ್ಯಾಣ್ ಸಿಂಗ್ ಗೆಲುವನ್ನು ಸಾಧಿಸಿದ್ದರು.
ಅಯೋಧ್ಯೆ ಚಳವಳಿಯ ಸಂದರ್ಭದಲ್ಲಿಯೇ ಮೊದಲ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಕಲ್ಯಾಣ್ ಸಿಂಗ್ ಆಯ್ಕೆಯಾದರು. 1997 ಸೆಪ್ಟೆಂಬರ್ ನಲ್ಲಿ ಎರಡನೇ ಬಾರಿಗೆ ಕಲ್ಯಾಣ್ ಸಿಂಗ್ ಉತ್ತರ ಪ್ರದೇಶ ಮುಖ್ಯಮಂತ್ರಿಯಾದರು.