Saturday, November 23, 2024
Saturday, November 23, 2024

ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಟರಿ ಮಾಹೆ ಸ್ಕಿನ್ ಬ್ಯಾಂಕ್ ಉದ್ಘಾಟನೆ

ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಟರಿ ಮಾಹೆ ಸ್ಕಿನ್ ಬ್ಯಾಂಕ್ ಉದ್ಘಾಟನೆ

Date:

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯಲ್ಲಿ ಶನಿವಾರ ಕರಾವಳಿ ಕರ್ನಾಟಕದ ಮೊಟ್ಟಮೊದಲ ಸ್ಕಿನ್ ಬ್ಯಾಂಕ್ (ಚರ್ಮ ನಿಧಿ) ಅನ್ನು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷರಾದ ಡಾ.ರಂಜನ್ ಆರ್ ಪೈ ಉದ್ಘಾಟಿಸಿದರು.

ರೋಟರಿ ಕ್ಲಬ್ ಮಣಿಪಾಲ ಟೌನ್ ಮತ್ತು ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿಯ ಪಾಲುದಾರಿಕೆಯಲ್ಲಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ರೋಟರಿ ಮಾಹೆ ಸ್ಕಿನ್ ಬ್ಯಾಂಕ್ ಅನ್ನು ಸ್ಥಾಪಿಸಲಾಗಿದೆ. ರೋಟರಿ ಕ್ಲಬ್ ಮಣಿಪಾಲ್ ಟೌನ್ ಉಪಕರಣಗಳನ್ನು ಖರೀದಿಸಲು ರೋಟರಿ ಫೌಂಡೇಶನ್‌ನ ಜಾಗತಿಕ ಅನುದಾನ ಕಾರ್ಯಕ್ರಮದಡಿ 83 ಲಕ್ಷ ರೂಪಾಯಿಗಳನ್ನು ನೀಡಿತು ಮತ್ತು ಅವಶ್ಯಕ ಮೂಲಸೌಕರ್ಯ ಗಳಿಗೆ ಮಾಹೆ 50 ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿತು.

ರೋಟರಿ ಮಾಹೆ ಸ್ಕಿನ್ ಬ್ಯಾಂಕ್ ಉದ್ಘಾಟಿಸಿ ಮಾತನಾಡಿದ ಡಾ ರಂಜನ್ ಪೈ ಅವರು, ಈ ಸ್ಕಿನ್ ಬ್ಯಾಂಕ್ ನಿಂದ ಈ ಪ್ರದೇಶದ ಸುಟ್ಟ ಗಾಯಗಳ ಸಂತ್ರಸ್ತರಿಗೆ, ವಿಶೇಷವಾಗಿ ಹಿಂದುಳಿದ ಜನರಿಗೆ ಸಹಾಯವಾಗಲಿದೆ. ಸ್ಕಿನ್ ಬ್ಯಾಂಕ್‌ನಲ್ಲಿ ಸುಲಭವಾಗಿ ಲಭ್ಯವಿರುವ ಚರ್ಮವನ್ನು ಬಳಸಿಕೊಂಡು ಸ್ಕಿನ್ ಗ್ರಾಫ್ಟಿಂಗ್ ಮಾಡುವ ಮೂಲಕ, ರೋಗಿಗಳಿಗೆ ಉತ್ತಮ ಆರೈಕೆ ಸಿಗಲಿದೆ, ಮತ್ತು ಅವರ ಜೀವನದ ಗುಣಮಟ್ಟ ಮತ್ತು ಆತ್ಮವಿಶ್ವಾಸ ಹೆಚ್ಚಲಿದೆ. ಅತ್ಯಾಧುನಿಕ ಮತ್ತು ಗುಣಮಟ್ಟದ ವೈದ್ಯಕೀಯ ಆರೈಕೆ ನೀಡುವಲ್ಲಿ ಮಾಹೆ ಯಾವಾಗಲೂ ಮುಂಚೂಣಿಯಲ್ಲಿದೆ.

ಈ ಸ್ಕಿನ್ ಬ್ಯಾಂಕ್‌ನೊಂದಿಗೆ, ಮಾಹೆ ವೈದ್ಯರು ಸುಟ್ಟ ಸಂತ್ರಸ್ತರಿಗೆ ಚಿಕಿತ್ಸೆ ನೀಡುವಲ್ಲಿ ತಮ್ಮ ಚಾಣಾಕ್ಷ ಕೌಶಲ್ಯಗಳೊಂದಿಗೆ ಗುಣಪಟ್ಟದ ಸೇವೆ ನೀಡಲಿದ್ದಾರೆ. ಇದನ್ನು ಸಾಧ್ಯವಾಗಿಸಿದ ರೋಟರಿ ಮತ್ತು ಮಾಹೆ ತಂಡವನ್ನು ಅಭಿನಂದಿಸುತ್ತೇನೆ ಎಂದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ ಎನ್ ಸಿ ಶ್ರೀಕುಮಾರ್ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಸ್ಕಿನ್ ಬ್ಯಾಂಕ್‌ನ ಅಗತ್ಯತೆ ಮತ್ತು ಉಪಯುಕ್ತತೆಯನ್ನು ವಿವರಿಸಿ ಮಾತನಾಡುತ್ತಾ, ದೊಡ್ಡ ಸುಟ್ಟ ಗಾಯಗಳ ಸಂದರ್ಭಗಳಲ್ಲಿ, ಅಂದರೆ, ಶೇಕಡಾ 30-40 ಕ್ಕಿಂತ ಹೆಚ್ಚು ಗಾಯಗೊಂಡರೆ, ರೋಗಿಗಳು ತಮ್ಮ ಚರ್ಮವನ್ನು ಬಳಸಿಕೊಳ್ಳಲು ಆಗುವುದಿಲ್ಲ. ಹಲವಾರು ದುಬಾರಿ ದರದ ಬದಲಿ ಚರ್ಮಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಮೃತ ಮಾನವರ ಚರ್ಮವು ಅತ್ಯುತ್ತಮ ಬದಲಿ ಚರ್ಮವಾಗಿದೆ. ಕಸ್ತೂರ್ಬಾ ಆಸ್ಪತ್ರೆಯಲ್ಲಿ ಈಗ ಸ್ಕಿನ್ ಬ್ಯಾಂಕ್ ಆರಂಭವಾಗುತ್ತಿರುವುದರಿಂದ, ಸುಟ್ಟ ಗಾಯದ ರೋಗಿಗಳು ಭಾರತದ ಇತರ ಭಾಗಗಳಿಂದ ಚರ್ಮವನ್ನು ಪಡೆಯಲು ನಿರ್ಣಾಯಕ ಅವಧಿಯ 2-3 ದಿನಗಳವರೆಗೆ ಕಾಯಬೇಕಾಗಿಲ್ಲ. ಚರ್ಮದ ಲಭ್ಯತೆಯೂ ಒಂದು ಸಮಸ್ಯೆಯಾಗಿದೆ. ನಮ್ಮದೇ ಚರ್ಮವನ್ನು ನಾವು ಮರಳಿ ಪಡೆಯುವ ಮೂಲಕ, ನಾವು ಬೇಗನೆ ಚಿಕಿತ್ಸೆಯನ್ನು ಪ್ರಾರಂಭಿಸಬಹುದು ಮತ್ತು ನೋವನ್ನು ಕಡಿಮೆ ಮಾಡಬಹುದು ಜೊತೆಗೆ ಜೀವ ಉಳಿಸಬಹುದು ಎಂದು ಹೇಳಿದರು.

ಸಮಾರಂಭದ ಮುಖ್ಯ ಅತಿಥಿಯಾಗಿದ್ದ ರೋಟರಿ ಜಿಲ್ಲಾ 3182ನ ಗವರ್ನರ್ ಪಿಎಚ್‌ಎಫ್ ಎಂಜಿ ರಾಮಚಂದ್ರ ಮೂರ್ತಿಯವರು ಮಾತನಾಡುತ್ತಾ, ರೋಟರಿಯ ಈ ವರ್ಷದ ಥೀಮ್ ‘ಜೀವನವನ್ನು ಬದಲಾಯಿಸಲು ಸೇವೆ ಮಾಡುವುದು’. ರೋಟರಿ ಮತ್ತು ಮಾಹೆಯ ಜಂಟಿ ಯೋಜನೆಯು ಜನರ ಜೀವನವನ್ನು ಬದಲಿಸಲು ಸಮುದಾಯಕ್ಕೆ ಸ್ಕಿನ್ ಬ್ಯಾಂಕ್ ಅನ್ನು ನೀಡುತ್ತಿದೆ. ರೋಟರಿ ಫೌಂಡೇಶನ್, ಮಾಹೆ, ರೋಟರಿ ಇಂಟರ್‌ನ್ಯಾಷನಲ್ ಡಿಸ್ಟ್ರಿಕ್ಟ್ 3182 ಮತ್ತು ಈ ಯೋಜನೆಯಲ್ಲಿ ಕೈ ಜೋಡಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಎಂಜಿ ರಾಮಚಂದ್ರ ಮೂರ್ತಿಯವರು ಸದಾನಂದ ಚಾತ್ರ, ರಾಜಾರಾಮ್ ಭಟ್ ಮತ್ತು ಗಣೇಶ್ ನಾಯಕ್ ಯವರೊಂದಿಗೆ ಸ್ಕಿನ್ ಬ್ಯಾಂಕ್ ಉಪಕರಣಗಳನ್ನು ಮಾಹೆಗೆ ಹಸ್ತಾಂತರಿಸಿದರು. ಮಾಹೆಯ ಪರವಾಗಿ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್.ಬಲ್ಲಾಳ್ ಉಪ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಮುಖ್ಯ ನಿರ್ವಹಣಾಧಿಕಾರಿಗಳಾದ ಸಿ ಜಿ ಮುತ್ತಣ್ಣ ಸ್ವೀಕರಿಸಿದರು.

ಗೌರವಾನ್ವಿತ ಅತಿಥಿಗಳಲ್ಲಿ ಒಬ್ಬರಾದ ನವಿ ಮುಂಬೈನ ನ್ಯಾಷನಲ್ ಬರ್ನ್ಸ್ ಸೆಂಟರ್‌ ಮತ್ತು ಸ್ಕಿನ್ ಬ್ಯಾಂಕ್ನ ನಿರ್ದೇಶಕರಾದ ಡಾ ಸುನಿಲ್ ಕೇಶ್ವಾನಿ ಮಾತನಾಡುತ್ತಾ, ಮಣಿಪಾಲದಲ್ಲಿ ಸ್ಕಿನ್ ಬ್ಯಾಂಕ್ ಬಂದಿರುವುದು ಕರ್ನಾಟಕಕ್ಕೆ ನಿಜಕ್ಕೂ ಮಹತ್ವದ ದಿನವಾಗಿದೆ. ಇದು ಅನೇಕ ಜೀವಗಳನ್ನು ಉಳಿಸಲು ಕಾರಣವಾಗಲಿದೆ. ಈ ಐತಿಹಾಸಿಕ ಸಂದರ್ಭದಲ್ಲಿ ಕೆಎಂಸಿ ಮಣಿಪಾಲ ಮತ್ತು ರೋಟರಿ ಕ್ಲಬ್ ಮಣಿಪಾಲ ಟೌನ್ ಗೆ ಅಭಿನಂದನೆಗಳು ಎಂದರು.

ಸಮಾರಂಭದ ಮುಖ್ಯ ಅತಿಥಿ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ ಮಾತನಾಡಿ, ರೋಟರಿ ಮಾಹೆ ಸ್ಕಿನ್ ಬ್ಯಾಂಕ್ ಅನ್ನು ಮಣಿಪಾಲದಲ್ಲಿ ಸ್ಥಾಪಿಸುವುದರೊಂದಿಗೆ, ಈ ಪ್ರದೇಶದ ಪ್ರಮುಖ ಸುಟ್ಟಗಾಯ ರೋಗಿಗಳಿಗೆ ಚರ್ಮವನ್ನು ಲಭ್ಯವಾಗಿಸುವ ಹೆಚ್ಚುವರಿ ಜವಾಬ್ದಾರಿ ನಮ್ಮ ಮೇಲಿದೆ. ಚರ್ಮದಾನ ಮಾಡಲು ಮತ್ತು ನಮ್ಮ ಸ್ಕಿನ್ ಬ್ಯಾಂಕ್‌ನಲ್ಲಿ ಸಾಕಷ್ಟು ಚರ್ಮ ಸಂಗ್ರಹವಾಗಲು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಾವು ಆದ್ಯತೆಯ ಮೇಲೆ ಕೆಲಸ ಮಾಡೋಣ. ರೋಟರಿಯ ಲೋಕೋಪಕಾರಿ ಚಟುವಟಿಕೆಯ ಮೂಲಕ, ನಾವು ಇದನ್ನು ಸಾಧಿಸಲು ಸಾಧ್ಯವಾಗಿದೆ, ಮತ್ತು ಈ ಸ್ಕಿನ್ ಬ್ಯಾಂಕ್ ಸ್ಥಾಪಿಸಲು ಸಹಕರಿಸಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಎಚ್ ಎಸ್ ಬಲ್ಲಾಳ್ ಅವರು ನಮ್ಮಲ್ಲಿ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಅಡಿಯಲ್ಲಿ 18 ಹಾಸಿಗೆಗಳನ್ನು ಹೊಂದಿರುವ ಪೂರ್ಣ ಪ್ರಮಾಣದ ಬರ್ನ್ಸ್ ಘಟಕವನ್ನು ಹೊಂದಿದ್ದೇವೆ. ಇದಕ್ಕೆ ಪೂರಕವಾಗಿ ಖಂಡಿತವಾಗಿಯೂ ಸ್ಕಿನ್ ಬ್ಯಾಂಕ್ ನ ಅವಶ್ಯಕತೆ ಇದೆ. ಏಕೆಂದರೆ ಬಹುತೇಕ ಎಲ್ಲಾ ಸುಟ್ಟಗಾಯ ರೋಗಿಗಳಿಗೆ, ನಂತರ ಚರ್ಮದ ಕಸಿ ಅಗತ್ಯವಿರುತ್ತದೆ. ಅಂಗ ಮತ್ತು ಅಂಗಾಂಶ ದಾನವನ್ನು ನಮ್ಮೆಲ್ಲರ ಕರ್ತವ್ಯವೆಂದು ಪರಿಗಣಿಸಬೇಕು. ನಿಮ್ಮ ಅಂಗಗಳು ಮತ್ತು ಅಂಗಾಂಶಗಳನ್ನು ದಾನ ಮಾಡುವುದು ಕೇವಲ ದಾನ ಮಾತ್ರವಲ್ಲ, ಇದು ಬೇರೆಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ ಎಂದರು.

ಪಿಎಚ್‌ಎಫ್ ಶೇಷಪ್ಪ ರೈ ಅವರು ಪ್ರಮುಖ ಕೊಡುಗೆದಾರರಾದ ಅಮೆರಿಕದ ಡಾ. ವಸಂತ ಪ್ರಭು ಮತ್ತು ದಿನೇಶ್ ನಾಯಕ್ ಮತ್ತು ರೋಟರಿ ಪ್ರತಿಷ್ಠಾನದ ಟ್ರಸ್ಟಿ ಗುಲಾಮ್ ಎ ವಾಹನ್ವತಿಯ ಸಂದೇಶಗಳನ್ನು ಓದಿದರು. ರೋಟರಿ ಕ್ಲಬ್ ಮಣಿಪಾಲ ಟೌನ್ ಅಧ್ಯಕ್ಷ ಗಣೇಶ್ ನಾಯಕ್ ಸ್ವಾಗತಿಸಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ವಂದನಾರ್ಪಣೆ ಮಾಡಿದರು. ಮಾಹೆ ಕಾರ್ಪೊರೇಟ್ ಸಂಬಂಧಗಳ ನಿರ್ದೇಶಕ ಡಾ. ರವಿರಾಜ ಎನ್ ಎಸ್ ಕಾರ್ಯಕ್ರಮ ನಿರೂಪಿಸಿದರು.

ರೋಟರಿ -ಮಾಹೆ ಸ್ಕಿನ್ ಬ್ಯಾಂಕ್ ಸಹಾಯವಾಣಿ ಸಂಖ್ಯೆ -09686676564

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತಿಹಾಸದ ಅವಲೋಕನ ಬದುಕಿನ ಪುನರ್ ವಿಮರ್ಶೆಗೆ ಸಹಾಯಕ: ಶಬಾನ್ ಅಂಜುಮ್

ಕೋಟ, ನ.22: ಇತಿಹಾಸದ ಪಿತಾಮಹ ಹೆರೋಡಟಸ್ ಸಂಸ್ಕೃತಿಗಳ ತಿಳಿಯಲು ಒಂದು ಉತ್ತಮ...

ಆನಂದತೀರ್ಥ: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.22: ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪಾಜಕ ಆನಂದತೀರ್ಥ ಪ.ಪೂ ಕಾಲೇಜು...

ಸಾಂಸ್ಕೃತಿಕ ಸ್ಪರ್ಧೆ: ಮಣಿಪಾಲ ಜ್ಞಾನಸುಧಾದ ವಿದ್ಯಾರ್ಥಿಗಳ ಅಮೋಘ ಸಾಧನೆ

ಉಡುಪಿ, ನ.22: ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ...

ಅರುಣ್ಯಾ 2024: ಭಂಡಾರಕಾರ್ಸ್ ಪಿಯು ಕಾಲೇಜು ತಂಡ ಚಾಂಪಿಯನ್

ಬಸ್ರೂರು, ನ.22: ಶ್ರೀ ಶಾರದಾ ಕಾಲೇಜು ಬಸ್ರೂರು ಇಲ್ಲಿ ಉಡುಪಿ ಜಿಲ್ಲಾಮಟ್ಟದ...
error: Content is protected !!