ಅದೊಂದು ಕಾಲವಿತ್ತು ಸ್ವಾತಂತ್ರ್ಯದಿನಾಚರಣೆ ಅಂದ್ರೆ ಆಗಸ್ಟ್ ಮೊದಲ ವಾರದಿಂದಲೇ ಪ್ರಾರಂಭವಾಯಿತು ಎಂದರ್ಥ. ಹೌದು ತೊಂಭತ್ತರ ದಶಕದಲ್ಲಿನ ನಮ್ಮಂಥ ಕೋಟ್ಯಾಂತರ ಭಾರತೀಯ ಮಕ್ಕಳ ಎದೆಯೊಳಗೆ ಆಗಸ್ಟ್ ಹದಿನೈದರ ಆ ದಿನಗಳು ನೆನಪಿರಬಹುದು. ಈ ದಿನಕ್ಕಾಗಿ ನಾವೆಷ್ಟು ಕಾದಿದ್ದೆವೊ ಗೊತ್ತಿಲ್ಲ, ಏಕೆಂದರೆ ನಮ್ಮ ಬಾಲ್ಯದ ದಿನಗಳಲ್ಲಿ ಆಗಸ್ಟ್ ಹದಿನೈದರ ಈ ದಿನಕ್ಕಾಗಿ ನಾವು ಏನೆಲ್ಲ ತಯಾರಿ ಮಾಡುತ್ತಿದ್ದೇವೆನ್ನುವುದನ್ನು ಹೇಳುತ್ತಾ ಹೋದರೆ ಈಗಿನ ಕಾಲದ ಮಕ್ಕಳಿಗೆ ಇದು ಭ್ರಮೆ! ಸುಳ್ಳು ಎಂದು ತಿಳಿದುಕೊಳ್ಳಬಹುದು.
ಬಾಲ್ಯದ ದಿನಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಎಂದರೆ ಅದೊಂದು ಶಬ್ದ ಕಲ್ಪಗಳಿಗೆ ನಿಲುಕದ ಸಿಲುಕದ ಅತ್ಯುತ್ಸಾಹವಾದ ಸಂಭ್ರಮ; ಮಾತ್ರವಲ್ಲ ದೇಶಭಕ್ತಿ ತನ್ನಿಂದ ತಾನೆ ನಮ್ಮೊಳಗೆ ಅಂಕುರಿಸಿ ಮಾರ್ಧನಿಸಿಕೊಂಡ ಆ ಸವಿಯನ್ನು ನೆನಪಿಸಿಕೊಂಡಾಗಲೆಲ್ಲಾ ಮೈಮನ ರೋಮಾಂಚನಗೊಂಡು ಮನಸ್ಸು ಪುಳಕಿತವಾಗುತ್ತದೆ. ಅಂದು ನಮ್ಮ ಶಿಕ್ಷಕರು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಿಳಿಸುತ್ತಾ ದೇಶ, ಸ್ವಾತಂತ್ರ್ಯ ಹೋರಾಟಗಾರರನ್ನು ಪರಿಚಯಿಸುತ್ತಾ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಭಾಷಣ ಸ್ಪರ್ಧೆ, ಪ್ರಬಂಧ, ದೇಶಭಕ್ತಿಗೀತೆ ಇವುಗಳನ್ನು ಸ್ಪರ್ಧೆ ಎಂದು ಪರಿಗಣಿಸದೆ ನಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ನಿಜವಾದ ಅರ್ಥವನ್ನು ತಿಳಿಸಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ತ್ಯಾಗ ಬಲಿದಾನದ ಮೂಲಕ ಅಮರರಾದ ವೀರರ ಸ್ವಾತಂತ್ರ್ಯ ಹೋರಾಟದ ರೋಚಕ ಕಥೆಯನ್ನು ಬಣ್ಣಿಸುತ್ತಾ ನಮ್ಮೊಳಗೆ ಮಾತೃಭೂಮಿ ಪ್ರೇಮವನ್ನು ಮನಸ್ಸಿನಲ್ಲಿ ತುಂಬಿಸಿದ್ದು ಅಂದಿನ ಪಾಠಗಳು.
ಪಾಠ ಪುಸ್ತಕವನ್ನು ತೆರೆಯುತ್ತಿದ್ದಂತೆ ಮನಸ್ಸು ಅರಳಿಸುತ್ತಿದ್ದ ರಾಣಿ ಅಬ್ಬಕ್ಕ ದೇವಿ, ಎಚ್ಚಮ್ಮ ನಾಯಕ, ಸಂಗೊಳ್ಳಿ ರಾಯಣ್ಣ ಮುಂತಾದ ನಾಟಕಗಳು, ಚಿತ್ರ ದುರ್ಗದ ಕೋಟೆ, ಸಂಗೊಳ್ಳಿ ರಾಯಣ್ಣ, ಲಾಲಾ ಲಜಪತ್ ರಾಯ್, ಬಿಪಿನ್ ಚಂದ್ರಪಾಲ್, ಬಾಲಗಂಗಾಧರ ತಿಲಕ್, ಶಿವಾಜಿ, ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ್ ಅಜಾದ್, ಭಗತ್ ಸಿಂಗ್, ಗೋಪಾಲಕೃಷ್ಣ ಗೋಖಲೆ, ಶಾಂತವೇರಿ ಗೋಪಾಲ ಗೌಡ, ಮೇಡಂ ಕಾಮಾ, ಕಿತ್ತೂರು ರಾಣಿ ಚೆನ್ನಮ್ಮ… ಮೊದಲಾದ ಸಾವಿರಾರು ವೀರರ ಕುರಿತಾದ ಜೀವನ ಘಟನೆಗಳು ಮತ್ತು ಕಥೆಗಳು. ಸೀಮೋಲ್ಲಂಘನಾ ಮುಂತಾದ ದೇಶಭಕ್ತಿ ಬಿಂಬಿಸುವ ಸ್ಫೂರ್ತಿದಾಯಕ ಪದ್ಯಗಳನ್ನು ಕಂಠಪಾಠ ಮಾಡಿಕೊಂಡು ನಮ್ಮದೇ ರಾಗ ತಾಳದಲ್ಲಿ ಕಿರುಚುತ್ತಿದ್ದ ನಮಗೆಲ್ಲ ದೇಶ, ದೇಶಭಕ್ತಿ ಸಹಜವಾಗಿಯೇ ಹೃದಯಕ್ಕೆ ಇಳಿದು ಬಿಟ್ಟಿತ್ತು.
ವಿದ್ಯಾರ್ಥಿಗಳಾಗಿದ್ದಾಗ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಗಾಗಿ ಪಥಸಂಚಲನ ಕಾರ್ಯಕ್ರಮವಿತ್ತು. ಅದಕ್ಕಾಗಿ ನಮ್ಮ ಅಧ್ಯಾಪಕರು ಆಗಸ್ಟ್ ತಿಂಗಳ ಮೊದಲೇ ಆಟದ ಮೈದಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿ ವಿದ್ಯಾರ್ಥಿಗಳು ತರಗತಿ ಪ್ರಕಾರ ಸಾಲಾಗಿ ನಿಲ್ಲಲು ಗೆರೆಗಳನ್ನು ಎಳೆಯುವುದು, ತರಗತಿ ಪ್ರಕಾರ ಪಥಸಂಚಲನ ಮಾಡಿಸುವಾಗ ಲೆಫ್ಟ್-ರೈಟ್ ಎಂದ್ಹೇಳುತ್ತಾ ನಡೆಯಲು ಅಭ್ಯಾಸ ಮಾಡಿಸುವುದು. ಧ್ವಜ ಸ್ತಂಭವನ್ನು ಶುಚಿಗೊಳಿಸಲು ನಾ ಮುಂದೆ ತಾ ಮುಂದೆನ್ನುತ್ತಾ ಓಡಿಹೋಗಿ ನೀರು ತಂದು ಶುಚಿಗೊಳಿಸುವುದು. ಧ್ವಜ ಸ್ತಂಭದ ಬದಿಯಲ್ಲಿ ಚಿಕ್ಕ ಚಿಕ್ಕ ಕಲ್ಲುಗಳನ್ನು ನೆಲಕ್ಕೆ ಗುದ್ದಿ ಭಾರತದ ಭೂಪಟ ಬಿಡಿಸುವುದು ಅದಕ್ಕೆ ಬಣ್ಣವನ್ನು ತುಂಬಿಸುವ ಸಾಹಸಮಯ ಪ್ರಯತ್ನಗಳು. ಶಾಲಾ ಮೈದಾನದ ಸುತ್ತಲೂ ಕಸ, ಕಡ್ಡಿ ಕಲ್ಲುಗಳನ್ನು ಹೆಕ್ಕುತ್ತಾ ಸ್ವಚ್ಛಗೊಳಿಸುವುದು.
ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಸಮಯದಲ್ಲಿ ಸ್ವಾತಂತ್ರ್ಯಹೋರಾಟಗಾರರ ಘೋಷಣೆಗಳನ್ನು ಕೂಗುವುದು. ಊರಿಡೀ ಮೆರವಣಿಗೆಯ ಮೂಲಕ ಸ್ವಾತಂತ್ರ್ಯ ಘೋಷಣೆಯನ್ನು ಕೂಗುತ್ತಾ ಸಾಗುವುದು. ರಾತ್ರಿ ಹಗಲೆನ್ನದೆ ಬಾಯಿಪಾಠ ಮಾಡಿಕೊಂಡಿರುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಶಾಲೆಯಲ್ಲಿ ತರಗತಿಯ ಮಧ್ಯದಲ್ಲಿ ಕರೆದು ಅಭ್ಯಾಸ ಮಾಡಿಸುತ್ತಿದ್ದ ಶಿಕ್ಷಕರು. ನಾ ಮುಂದೆ ತಾ ಮುಂದೆ ಎನ್ನುತ್ತ ದೇಶಭಕ್ತಿಯ ಹಾಡಿನಲ್ಲಿ ನಮ್ಮ ಸ್ವರವೊಂದನ್ನು ಮದ್ಯ ಸೇರಿಸಿಕೊಂಡು ಗುಂಪಾಗಿ ಹಾಡುವ ಅಭ್ಯಾಸ ಮಾಡಿದ ವಂದೇಮಾತರಂ, ವಿಜಯಿ ವಿಶ್ವತಿ…ಈ ಹಾಡುಗಳನ್ನು ದಾರಿಯುದ್ದಕ್ಕೂ ಒಟ್ಟಾಗಿ ಹಾಡುತ್ತಾ, ಮನೆಯಲ್ಲಿ ಅಲ್ಲೊಮ್ಮೆ ಇಲ್ಲೊಮ್ಮೆ ಭಾಷಣ, ಹಾಡನ್ನು ಕಿರುಚುತ್ತಿದ್ದುದನ್ನು ನೋಡಿದ ಅಮ್ಮನಿಗೆ ಆಗಲೇ ಗೊತ್ತಾಗಿ ಬಿಡುತ್ತಿತ್ತು ಸದ್ಯದಲ್ಲಿಯೇ ಸ್ವಾತಂತ್ರ್ಯ ದಿನ ಇದೆ ಎಂದು!
ಈ ರೋಮಾಂಚನ ದೇಶಭಕ್ತಿಯ ಕ್ಷಣಗಳನ್ನು ನೀಡಿದ್ದು ಅದೇ ತೊಂಭತ್ತರ ದಶಕದ ಶಾಲೆಗಳು ಮತ್ತು ಶಿಕ್ಷಕರು ಎಂದರೆ ಉತ್ಪ್ರೇಕ್ಷೆಯಾಗಲಾರದು. ಸ್ವಾತಂತ್ರ್ಯ ದಿನಾಚರಣೆಗಾಗಿ ನಾವು ಧ್ವಜವನ್ನು ತೆಗೆದುಕೊಳ್ಳಲು ಅದಾಗ್ಲೇ ಅಂಗಡಿಯವನ ಬಳಿ ಶಾಲೆ ಮುಗಿಸಿ ಬರುವಾಗ ಅದರ ಬೆಲೆ ಎಷ್ಟು ಎಂದು ತಿಳಿದುಕೊಂಡು ಆ ಹಣಕ್ಕಾಗಿ ನಾವು ಐದು ಪೈಸೆ ಹತ್ತು ಪೈಸೆ ಕೂಡಿಟ್ಟುಕೊಂಡು ಕಿಸೆಗೆ ಪಿನ್ ಮೂಲಕ ಸಿಕ್ಕಿಸಿಕೊಳ್ಳುವ ಧ್ವಜ, ಕೈಯಲ್ಲಿ ಹಿಡಿದುಕೊಳ್ಳುವ ಪ್ಲಾಸ್ಟಿಕ್ /ಕಾಗದದ ಧ್ವಜವನ್ನು ಕೊಂಡುಕೊಳ್ಳುವ ಧ್ವಜ ಪ್ರೀತಿ. ಆಗಸ್ಟ್ ಹದಿಮೂರು, ಹದಿನಾಲ್ಕರ ಮೊದಲೇ ಧ್ವಜವನ್ನು ಕೊಂಡು ಶಾಲಾ ಬ್ಯಾಗ್ನ ನೋಟ್ ಪುಸ್ತಕದ ನಡುವಿನಲ್ಲಿಟ್ಟು ತರಗತಿಯ ಮಧ್ಯದಲ್ಲೊಮ್ಮೆ ಮೆಲ್ಲನೆ ಸ್ನೇಹಿತರಿಗೆ ನಾವು ಕೊಂಡು ಕೊಂಡ ಧ್ವಜವನ್ನು ತೋರಿಸುತ್ತಾ…ನೋಡು ಧ್ವಜ ಟಿಂಬಕ್ಟು… ಟಿಂಬಕ್ಟು… ಎಂದೆನ್ನುತ್ತಾ ಬಾಯಲ್ಲಿ ಧ್ವನಿ ಮಾಡುತ್ತಾ ಜಂಭಪಟ್ಟುಕೊಳ್ಳುತ್ತಿದ್ದವರು ನಾವುಗಳು. ಅಂದು ಅದೆಷ್ಟೋ ವಸ್ತುಗಳು ನಮ್ಮ ಕಣ್ಣ ಮುಂದಿದ್ದರೂ ನಮಗೆ ಕಂಡದ್ದು ಮಾತ್ರ ಆ ತ್ರಿವರ್ಣಧ್ವಜ ಮಾತ್ರ. ಅದೇಕೋ ಗೊತ್ತಿಲ್ಲ ನಮಗೆಲ್ಲ ಸ್ವಾತಂತ್ರ್ಯ ದಿನಾಚರಣೆ ಎಂದರೆ ಅದು ಸಂಭ್ರಮ ಮಾತ್ರವಲ್ಲ ಅದೊಂದು ಹಬ್ಬ.
ಶಾಲೆಯಲ್ಲಿ ಬೇಗನೆ ನಡೆಯುವ ಧ್ವಜಾರೋಹಣ ಕಾರ್ಯಕ್ರಮ ಅದಕ್ಕಾಗಿ ತೊಡುವ ಅಂಗಿಗೆ ಪಿನ್ ಮೂಲಕ ಸಿಕ್ಕಿಸುವ ಧ್ವಜವನ್ನು ಸಿಕ್ಕಿಸಿಕೊಂಡು ರಾತ್ರಿಯಿಡಿ ಖುಷಿಪಟ್ಟದ್ದು, ಕನವರಿಸಿದ್ದು. ಧ್ವಜಾರೋಹಣಕ್ಕಾಗಿ ಬೇಗನೆದ್ದು ಶಾಲೆಗೆ ಬಂದು ಧ್ವಜ ಕಟ್ಟುತ್ತಿದ್ದು ಮೇಷ್ಟ್ರು ಹತ್ರ ಹೋಗಿ ಧ್ವಜ ತೋರಿಸಿದ್ದು, ಧ್ವಜವನ್ನು ಕಟ್ಟಲು ಬೇಕಾದ ಹಗ್ಗವನ್ನು ಕಂಬ ಹತ್ತಿ ಹಗ್ಗ ಸಿಕ್ಕಿಸಿ ಸುಯ್ಯೊನೆ ಕಂಬದಿಂದ ಇಳಿದದ್ದು! ಆ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಮುಗಿಸಿಕೊಂಡು ಶಾಲೆಯಲ್ಲಿ ನೀಡುತ್ತಿದ್ದ ಲಡ್ಡುಗಳನ್ನು ಅರ್ಧ ತಿಂದು ಉಳಿದರ್ಧ ಲಡ್ಡನ್ನು ಅಮ್ಮನಿಗೆ ಕೊಡಲು ಚಡ್ಡಿ ಕಿಸೆಯಲ್ಲಿ ಇಟ್ಟುಕೊಂಡದ್ದು.
ಊರಿನ ಸಂಘ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳುವ ಸ್ವಾತಂತ್ರ್ಯ ದಿನಾಚರಣೆಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ತೆಗೆದುಕೊಳ್ಳಲು ನಾವು ಮಾಡುತ್ತಿದ್ದ ಪ್ರಯತ್ನಗಳು; ಅಂದು ಮನೆಯಲ್ಲಿ ಇರುವ ಸೈಕಲ್ಲನ್ನು ಮೆಲ್ಲನೆ ತೆಗೆದುಕೊಂಡು ಹೋಗಿ ಅದಕ್ಕೆ ಧ್ವಜವನ್ನು ಸಿಕ್ಕಿಸಿ ಊರಿಡೀ ಸುತ್ತಾಡಿದ್ದು, ಸಂಭ್ರಮಿಸಿದ್ದು ಮಾತ್ರವಲ್ಲದೆ ಸ್ನೇಹಿತರನ್ನು ಸೇರಿಸಿಕೊಂಡು ಕಂಬವನ್ನು ಊರಿ ಧ್ವಜಾರೋಹಣದ ರೀತಿಯಲ್ಲಿ ಅಣುಕು ಪ್ರದರ್ಶನದ ಆಟಗಳನ್ನು ಆಡುತ್ತಾ ಆ ಆಗಸ್ಟ್ ಹದಿನೈದರ ದಿನವನ್ನು ಪ್ರತಿ ವರುಷ ಅದೇ ರೀತಿಯಾಗಿ ಸಂಭ್ರಮಿಸಿ ಖುಷಿಪಟ್ಟ ದಿನಗಳು ಇಂದಿಗೂ ಅಚ್ಚಳಿಯದೆ ಉಳಿದಿದೆ.
ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲಬೇಕು, ಎಲ್ಲಿಯಾದರೂ ಹೋದಾಗ ರಾಷ್ಟ್ರಗೀತೆ ಕೇಳುತ್ತಿದ್ದರೆ ಅಲ್ಲಿಯೇ ನಿಂತುಕೊಂಡು ಗೌರವ ಸಲ್ಲಿಸಿ ಮುಂದೆ ಹೋಗಬೇಕು, ತ್ರಿವರ್ಣ ಧ್ವಜ, ಧ್ವಜ ಸ್ತಂಭ, ರಾಷ್ಟ್ರ ನಾಯಕರ ಬಗೆಗೆ ಗೌರವ ಅಭಿಮಾನ ಇಟ್ಟುಕೊಳ್ಳಬೇಕೆಂಬ ನೀತಿ ಸಂಹಿತೆಗಳನ್ನು ನಾವು ಪಾಠದಿಂದ ಮತ್ತು ಪಾಠ ಹೇಳುವ ಶಿಕ್ಷಕರಿಂದ ತಿಳಿದುಕೊಂಡು ಬಿಟ್ಟೆವು. ಕಾಲ ಬದಲಾಗಿದೆ ಜಗತ್ತು ಮುಂದೆ ಸಾಗ್ತಾ ಇದೆ, ಕಾಲದೊಂದಿಗೆ ದೇಶಭಕ್ತಿಯೆಂಬ ಮೂಲಭೂತ ಕರ್ತವ್ಯವು ಇಂದು ಮೌಲ್ಯಶಿಕ್ಷಣದ ಪುಟ ಸೇರಿದ್ದು ಮಾತ್ರ ವಿಪರ್ಯಾಸವೇ ಸರಿ. ಇತಿಹಾಸ, ಪೌರನೀತಿಯ ಪುಸ್ತಕದ ಪುಟದೊಳಗೆ ಭದ್ರವಾಗಿರುವ ಈ ನೀತಿ ಸಂಹಿತೆಗಳನ್ನು ಕಂಠಪಾಠ ಮಾಡಿಕೊಂಡು ಓದಿ ಬರೆದು ನೂರಕ್ಕೆ ನೂರು ಅಂಕವನ್ನು ಪಡೆಯುವ ವಿದ್ಯಾರ್ಥಿಗಳು ಸ್ವಾತಂತ್ರ್ಯ, ದೇಶ, ದೇಶಭಕ್ತಿ ಪದವನ್ನು ಅರ್ಥೈಸಿಕೊಂಡ ಪರಿ ಮಾತ್ರ ಅಚ್ಚರಿಯಾದದ್ದು.
ದೇಶ, ದೇಶಭಕ್ತಿ, ಮೂಲಭೂತ ಕರ್ತವ್ಯಗಳನ್ನು ಮತ್ತೊಮ್ಮೆ ತಿಳಿಸಿಕೊಡಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ಭಾರತೀಯನ ಮೇಲಿದೆ. ಇಲ್ಲಿ ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನಾನೇನು ಕೊಟ್ಟಿದ್ದೇನೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತಾ ಹೋದಂತೆ ಮತ್ತೆ ನೆನಪಾಗುವುದು ಆ ಬಾಲ್ಯದ ದಿನಗಳು ಧ್ವಜವನ್ನು ತೆಗೆದುಕೊಳ್ಳಲು ಅಮ್ಮನ ಬಳಿ- “ಅಮ್ಮ … ಧ್ವಜ ತಗ್ಗೊಳ್ಲಿಕ್ಕೆ ಒಂದು ಐವತ್ತು ಪೈಸೆ ಇದ್ರೆ ಕೊಡಮ್ಮ”.. ಎಂದ್ಹೇಳಿ ಕೈಚಾಚಿ ಕೇಳುತ್ತಿದ್ದ ಈ ಮಾತು ತೊಂಭತ್ತರ ದಶಕದಲ್ಲಿ ನಾವು ಆಚರಿಸುತ್ತಿದ್ದ ಸ್ವಾತಂತ್ರ್ಯ ದಿನಾಚರಣೆಯ ನೆನಪುಗಳು. ಆ ನೆನಪನ್ನು ಆಗಾಗ್ಗೆ ಮೆಲುಕು ಹಾಕುತ್ತಾ ಹೋದಂತೆ ಆಗಸ್ಟ್ ಹದಿನೈದು ಕಣ್ಣ ಮುಂದೆ ಸುಳಿದಾಡುತ್ತದೆ, ಸುತ್ತಲೂ ತ್ರಿವರ್ಣ ಧ್ವಜ ಹಾರಾಡುತ್ತದೆ.
-ಪ್ರದೀಪ್ ಡಿ.ಎಮ್. ಹಾವಂಜೆ