ಬ್ರಹ್ಮಾವರ: ರಿಪೆನ್ಸ್ ಹೆಲ್ತ್ ಕೇರ್ ಪ್ರೈ ಲಿ., ಎಸ್.ಡಿ.ಪಿ ರೂರಲ್ ಡೆವಲಪ್ಮೆಂಟ್ ಸೊಸೈಟಿ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಪ್ಲಾಂಟ್ ಫಾರ್ ದ ನೇಶನ್ ಕಾರ್ಯಕ್ರಮಕ್ಕೆ ಶುಕ್ರವಾರ ಬ್ರಹ್ಮಾವರ ಪೊಲೀಸ್ ಠಾಣೆಯ ಪರಿಸರದಲ್ಲಿ ಚಾಲನೆ ನೀಡಲಾಯಿತು. ಉಡುಪಿ ಜಿಲ್ಲಾ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಗುರುನಾಥ್ ಬಿ ಹಾದಿಮನಿ ರಕ್ತ ಚಂದನ ಗಿಡಗಳನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ಯ, ಇದೊಂದು ಮಾದರಿ ಕಾರ್ಯಕ್ರಮ. ನಾಗರಿಕರು ಇದರ ಮಾಹಿತಿ ಪಡೆದು ಗಿಡ ನೆಟ್ಟು ಪ್ರಯೋಜನ ಪಡೆದುಕೊಳ್ಳಿ ಎಂದು ತಿಳಿಸಿದರು.
ಬ್ರಹ್ಮಾವರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಗುರುನಾಥ್ ಬಿ ಹಾದಿಮನಿ ಮಾತನಾಡುತ್ತಾ, ಕೋವಿಡ್ ಆಗಮನದ ನಂತರ ಆಮ್ಲಜನಕ ಹಾಗೂ ಗಿಡ ಮರಗಳ ಪ್ರಾಮುಖ್ಯತೆಯ ಕುರಿತು ಜನರಿಗೆ ಹೆಚ್ಚು ಅರ್ಥವಾಗಿದೆ. ಪರಿಸರ ರಕ್ಷಣೆ ಹಾಗೂ ಸ್ವಚ್ಛತೆಯಿಂದ ನಮ್ಮ ಆರೋಗ್ಯ ವೃದ್ಧಿಯಾಗುವುದು. ಆ ನಿಟ್ಟಿನಲ್ಲಿ ಇದೊಂದು ಉಪಯುಕ್ತ ಯೋಜನೆ ಎಂದರು.
ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡುವ ದೂರದೃಷ್ಟಿಯೊಂದಿಗೆ ಪ್ರಾರಂಭಿಸಿದ ಯೋಜನೆ ಪ್ಲಾಂಟ್ ಫಾರ್ ದ ನೇಶನ್. ಪ್ರಾಯೋಗಿಕವಾಗಿ ಇಲ್ಲಿ ಪ್ರಾರಂಭಿಸಿ ಮುಂದೆ ಇದರ ಯಶಸ್ಸಿನ ಹೆಜ್ಜೆಯೊಂದಿಗೆ ದೇಶದಾದ್ಯಂತ ಯೋಜನೆಯನ್ನು ಅನುಷ್ಠಾನಗೊಳಿಸಿ ಪ್ರಕೃತಿ ಹಾಗೂ ಬಡ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಮುಂದುವರಿಯುವ ಯೋಚನೆ ಹಾಗೂ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸುವ ಜವಾಬ್ದಾರಿಯೊಂದಿಗೆ ರಿಪೆನ್ಸ್ ಮುಂದುವರಿಯುವುದು ಎಂದು ರಿಪೆನ್ಸ್ ಹೆಲ್ತ್ ಕೇರ್ ಪ್ರೈ ಲಿ. ಮುಖ್ಯಸ್ಥ ಹಾಗೂ ನಿರ್ದೇಶಕ ಪವನ್ ಶೆಟ್ಟಿ ಹೇಳಿದರು.
ಇಂದು ನೆಡುವ ಒಂದು ರಕ್ತ ಚಂದನ ಗಿಡ 15 ವರ್ಷದ ನಂತರ ಅದರಿಂದ ಸಿಗುವಂತ ಆರ್ಥಿಕ ಮೊತ್ತದಿಂದ ಒಂದು ಹೆಣ್ಣು ಮಗುವಿನ ಭವಿಷ್ಯ ರೂಪಿಸಬಹುದು, ಮೇಲಾಗಿ ಪ್ರಕೃತಿ ಹಸನಾಗುವುದು, ನಾವೆಲ್ಲರೂ ಉತ್ತಮ ಗಾಳಿ ಮಳೆಯಿಂದ ಆರೋಗ್ಯಕರ ಜೀವನ ನಡೆಸಬಹುದು ಎಂದು ಎಸ್.ಡಿ.ಪಿ ರೂರಲ್ ಡೆವಲಪ್ಮೆಂಟ್ ಸೊಸೈಟಿ ನಿರ್ದೇಶಕ ಎಸ್. ಬಿ. ಶೆಟ್ಟಿ ಹೇಳಿದರು. ಒಟ್ಟು 36 ರಕ್ತ ಚಂದನ ಹಾಗೂ ಶ್ರೀಗಂಧದ ಗಿಡಗಳನ್ನು ನೆಡಲಾಯಿತು.
ಬ್ರಹ್ಮಾವರ ಕೆ.ವಿ.ಕೆ ಹಿರಿಯ ವಿಜ್ಞಾನಿ ಡಾ. ಬಿ. ಧನಂಜಯ, ಬ್ರಹ್ಮಾವರ ಉಪವಲಯ ಅರಣ್ಯಾಧಿಕಾರಿ ಹರೀಶ್, ರಕ್ತ ಚಂದನ ಬೆಳೆಗಾರರು, ರೈತರು ಆಗಿರುವ ಪುಟ್ಟಯ್ಯ ಶೆಟ್ಟಿ, ಕರುಣಾಕರ ಶೆಟ್ಟಿ, ಬ್ರಹ್ಮಾವರ ಪೊಲೀಸ್ ಠಾಣೆಯ ಸಿಬ್ಬಂದಿ ವರ್ಗದವರು, ಸ್ಥಳೀಯರು ಉಪಸ್ಥಿತರಿದ್ದರು. ರಿಪೆನ್ಸ್ ಹೆಲ್ತ್ ಕೇರ್ ವಲಯ ಅಧಿಕಾರಿ ಸುಬ್ರಹ್ಮಣ್ಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.