ಬಿಜೆಪಿ ಸರಕಾರದಲ್ಲಿ ಬಹು ಅವಕಾಶ ವಂಚಿತರೆಂದರೆ ಉಡುಪಿ ಜಿಲ್ಲಾ ಪಂಚಕ್ಷೇತ್ರಗಳ ಶಾಸಕರುಗಳು. ನೂತನ ಮುಖ್ಯಮಂತ್ರಿಗಳ ಅಧಿಕಾರ ಪದಗ್ರಹಣವಾಗಿದೆ. ಇನ್ನು ಉಳಿದಿರುವುದು ಮಂತ್ರಿಮಂಡಲದ ರಚನೆ ಮಾತ್ರ. ಇದಕ್ಕಾಗಿ ಸಾಕಷ್ಟು ಲಾಬಿ ಒತ್ತಡ ನಡೆಯಲು ಪ್ರಾರಂಭವಾಗಿದೆ. ಕಳೆದ ಬಾರಿಯಾದರೂ ಯಡಿಯೂರಪ್ಪನವರ ಸರಕಾರದಲ್ಲಿ ಉಡುಪಿ ಜಿಲ್ಲೆಯ ಐದು ಮಂದಿ ಚುನಾಯಿತ ಶಾಸಕರುಗಳಲ್ಲಿ ಒಬ್ಬರಿಗಾದರೂ ಮಂತ್ರಿ ಪದವಿ ಸಿಗಬಹುದು ಎಂದು ಬಹು ನಿರೀಕ್ಷೆಯಲ್ಲಿದ್ದ ಉಡುಪಿ ಜಿಲ್ಲಾ ಮತದಾರರಿಗೆ ಸಾಕಷ್ಟು ಬೇಸರವಾಗಿದೆ. ಆದರೂ ನಮ್ಮ ಜನ ಸಹನಶೀಲರು ಹಾಗಾಗಿ ಯಾರು ಕೂಡ ನಮ್ಮ ಶಾಸಕರುಗಳನ್ನು ನೀವೇಕೆ ಸಚಿವರಾಗಲಿಲ್ಲ ಅಂತ ಪ್ರಶ್ನೆ ಮಾಡಲೇ ಇಲ್ಲ. ಅದೇ ರೀತಿಯಲ್ಲಿ ನಮ್ಮ ಶಾಸಕರುಗಳು ಕೂಡ ನಮಗ್ಯಾಕೆ ಮಂತ್ರಿ ನೀಡಲಿಲ್ಲ ಅಂತ ಮುಖ್ಯಮಂತ್ರಿಗಳನ್ನಾಗಲಿ ಪಕ್ಷದ ನಾಯಕರುಗಳನ್ನಾಗಲಿ ವಿಚಾರಿಸುವ ಗೌಜಿಗೂ ಹೋಗಲಿಲ್ಲ.
ಈ ಬಾರಿಯೂ ಅಷ್ಟೇ ನಮ್ಮ ಶಾಸಕರುಗಳು ಬೆಂಗಳೂರು ಡಿಲ್ಲಿಯ ಕಡೆ ಮುಖ ಮಾಡಿ ಧ್ವನಿ ಎತ್ತುವ ಕೆಲಸವನ್ನು ಕೂಡ ಖಂಡಿತವಾಗಿಯೂ ಮಾಡುವುದಿಲ್ಲ. ಬದಲಿಗೆ ನಮ್ಮ ಉಸ್ತುವಾರಿ ಸಚಿವರೇ ಮುಖ್ಯಮಂತ್ರಿಗಳಾಗಿದ್ದಾರೆ ಅಂದುಕೊಂಡು ಶುಭಾಶಯ ಕೋರಿ ಪಟಾಕಿ ಸುಟ್ಟು ಸಂಭ್ರಮಿಸಿದರೂ ಆಶ್ಚರ್ಯವಿಲ್ಲ.
ಹಾಗಾದರೆ ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಐದೂ ಬಿಜೆಪಿ ಶಾಸಕರು ಗೆದ್ದಿರುವಾಗ ಒಂದು ಸಾಮಾನ್ಯ ಸಚಿವ ಸ್ಥಾನವನ್ನು ನಮಗೇಕೆ ನೀಡುವ ಮನಸ್ಸು ಬಿಜೆಪಿಯ ವರಿಷ್ಠರು ಮಾಡುವುದಿಲ್ಲ ಅನ್ನುವುದನ್ನು ಒರೆ ಹಚ್ಚುವ ಕೆಲಸ ನಾವು ಅಗತ್ಯವಾಗಿ ಮಾಡಬೇಕಾದ ಸಂದರ್ಭ ಬಂದಿದೆ.
1. ಉತ್ತರ ಕರ್ನಾಟಕದ ಅರವಿಂದ ಬೆಲ್ಲದ ಕೇವಲ ಎರಡು ಬಾರಿ ಶಾಸಕರಾಗಿ ಮುಖ್ಯಮಂತ್ರಿಗಳ ಸ್ಥಾನದ ರೇಸಿನಲ್ಲಿ ಹೈಕಮಾಂಡಿನ ಗಮನ ಸೆಳೆಯುತ್ತಾರೆ ಅಂದರೆ ನಮ್ಮ ಜಿಲ್ಲೆಯಲ್ಲಿ ಸರಿ ಸುಮಾರು ಮೂರು ನಾಲ್ಕು ಐದು ಬಾರಿ ಸೋಲರಿಯದ ಪಕ್ಷದ ನಿಷ್ಠಾವಂತ ಶಾಸಕರಾಗಿ ಪ್ರಾಮಾಣಿಕತೆಯಿಂದ ಸೇವೆ ನೀಡುತ್ತಾ ಬಂದಿರುವವರಿಗೆ ಒಂದು ಮಂತ್ರಿಸ್ಥಾನ ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಂದರೆ ಇಲ್ಲಿ ಯಾರನ್ನು ದೂಷಿಸಬೇಕು? ಶಾಸಕರನ್ನೋ, ಜನರನ್ನೊ; ಬಿಜೆಪಿ ಪಕ್ಷದ ನಾಯಕರುಗಳನ್ನೊ ನೀವೇ ಹೇಳಿ?
2. ಹಾಗಾದರೆ ಉಡುಪಿ / ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಶಾಸಕರುಗಳಲ್ಲಿ ಸಚಿವರಾಗುವ ಅರ್ಹತೆಯೇ ಇಲ್ವೇ? ಉಳಿದ ಜಿಲ್ಲೆಯ ಶಾಸಕರುಗಳು ತುಂಬ ಸ್ಮಾರ್ಟ್ ಅಂತೆ; ನೀಲಿ ಕಣ್ಣಂತೆ ಹಾಗಾದರೆ ನಮ್ಮ ಶಾಸಕರುಗಳ ಕಣ್ಣು ಕೆಂಪಾಗಿದಿಯಾ ಹೇಗೆ?
3. ನನಗನ್ನಿಸುವಂತೆ ನಮ್ಮ ಜನರು ನಮ್ಮ ಶಾಸಕರುಗಳು ತುಂಬ ಪಕ್ಷ ನಿಷ್ಠೆ ತೋರಿಸಿರುವುದೇ ಈ ರೀತಿಯಾಗಲು ಕಾರಣವಿರಬಹುದು!
4. ಬಿಜೆಪಿಯವರೂ ಕೂಡ ಉಡುಪಿ ಜಿಲ್ಲಾ ಮತದಾರರು ಬಿಜೆಪಿಯ ಮತ ಬ್ಯಾಂಕ್ ಅಂತ ತಿಳಿದುಕೊಂಡಿದ್ದಾರೆ ಅನ್ನುವ ಸಂಶಯ ಕಾಡುತ್ತಿದೆ.
5. ಪಾಪ, ನಮ್ಮ ಶಾಸಕರುಗಳು ಅಷ್ಟೇ.. ಪಕ್ಷದ ವಿರುದ್ಧವಾಗಲಿ ಸರಕಾರದ ವಿರುದ್ಧವಾಗಲಿ ಎಂದೂ ಧ್ವನಿ ಎತ್ತಲೂ ಹೋಗುವುದೇ ಇಲ್ಲ. ಎಲ್ಲಿಯಾದರೂ ಧ್ವನಿ ಎತ್ತಿದರೆ ನಾವು ಪ್ರಬುದ್ಧ ಮತದಾರರು ಸೋಲಿಸಿ ಬಿಡುತ್ತೇವೆ ಅನ್ನುವ ಭಯವಿರಬೇಕು. ಹಾಗಾಗಿ ತೆಪ್ಪಗೆ ಕೂತು ಬಿಡುವ ಸ್ವಭಾವ ಹುಟ್ಟು ಗುಣವಾಗಿ ಬೆಳೆದಿದೆ.
6. ನಮ್ಮ ಶಾಸಕರುಗಳು ಅಷ್ಟೇ.. ಬರೇ ಗದ್ದೆ ಬದಿ, ಕಾಡು ಬದಿ, ಸಮುದ್ರ ಬದಿ ಗೌಜಿ ಮಾಡಿದರೆ ಪ್ರಯೋಜನವಿಲ್ಲ. ವಿಧಾನ ಸೌಧದ ಚಾವಾಡಿ ಒಳಗೂ ಹೊರಗೂ ಸ್ವಲ್ಪ ಸುದ್ದಿ ಮಾಡಿ. “ಮಗು ಅತ್ತರೆ ಮಾತ್ರ ತಾಯಿ ಹಾಲು ಕೊಡುವುದು ಅಲ್ವಾ?” ನೀವು ಅದನ್ನೂ ಮಾಡದಿದ್ರೆ ಹೇಗೆ?
7. ನಮ್ಮ ಶಾಸಕರುಗಳು ಎಷ್ಟು ನಿಷ್ಠಾವಂತರು ಅಧಿಕಾರ ದಾಹವಿಲ್ಲದವರು ಅಂದರೆ ನಮ್ಮ ಉಡುಪಿಯಲ್ಲಿ ಎರಡು ಬಾರಿ ಶಾಸಕರಾದ ರಘುಪತಿ ಭಟ್ಟರು ಹೇಳುತ್ತಾರೆ “ಈ ಬಾರಿಯಾದರೂ ಮಂತ್ರಿ ಪದವಿ ಹಂಚುವಾಗ ಕನಿಷ್ಟ ಪಕ್ಷ ಕುಂದಾಪುರದ ಶ್ರೀನಿವಾಸ ಶೆಟ್ಟಿರಿಗಾಗಲಿ ಕಾರ್ಕಳದ ಸುನೀಲ್ ಕುಮಾರ ರಿಗಾಗಲಿ ನೀಡಿ” ಎಂದು ನಿವೇದಿಸಿಕೊಳ್ಳುತ್ತಾರೆ ಬಿಟ್ಟರ ತಾನು ಕೂಡಾ ಅರ್ಹತೆಯುಳ್ಳ ಓರ್ವ ಶಾಸಕ ಅನ್ನುವುದನ್ನು ತಿಳಿದು ಕೂಡ ತನಗಾಗಿ ಕೇಳದೇ ಬೇರೆಯವರಿಗೆ ಮಂತ್ರಿ ನೀಡಿ ಅಂತ ಕೇಳುತ್ತಾರೆ ಅಂದರೆ ಇಂತಹ ಒಬ್ಬ ಶಾಸಕರನ್ನು ಈ ದೇಶದಲ್ಲಾಗಲಿ ಈ ರಾಜ್ಯದಲ್ಲಾಗಲಿ ತೋರಿಸಿ ಕೊಡಿ ನೋಡೋಣ?
8. ಕುಂದಾಪುರದ ಶ್ರೀನಿವಾಸ ಶೆಟ್ಟ್ರ ಹಾಗೇ ಬರೋಬ್ಬರಿ 21 ವರುಷ ಮೇಲ್ಪಟ್ಟು ಶಾಸಕರಾಗಿದ್ದರೂ ಕೂಡ ಒಂದು ಮಂತ್ರಿ ಪದವಿ ಕುಂದಾಪುರ ಕ್ಷೇತ್ರಕ್ಕೆ ನೀಡಲು ಪಕ್ಷಕ್ಕೆ ಸಾಧ್ಯವಾಗಿಲ್ಲ ಅಂದರೆ ಇದು ಕುಂದಾಪುರದ ದೌರ್ಭಾಗ್ಯವೇ ಸರಿ. ಅವರಾಗಿ ಕೇಳುವವರಲ್ಲ. ಹಾಗಾಗಿ ಅವರ ಪರವಾಗಿ ಕ್ಷೇತ್ರದ ಜನ ಕೇಳಬೇಕಾದ ಪರಿಸ್ಥಿತಿ ಬಂದಿದೆ.
ಕಾದು ನೋಡೋಣ; ಈ ಬಾರಿಯಾದರೂ ಉಡುಪಿ ಜಿಲ್ಲೆಗೆ ಮಂತ್ರಿಸ್ಥಾನ ಒಲಿದು ಬರಬಹುದೇ?
-ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.