ಉಡುಪಿ: ಇದೇ ಬರುವ ಅಗಸ್ಟ್ ತಿಂಗಳಲ್ಲಿ ಮೀನುಗಾರಿಕಾ ಋತು ಪ್ರಾರಂಭಗೊಳ್ಳುವ ನಿಟ್ಟಿನಲ್ಲಿ ಸರಕಾರ ಈ ಕೂಡಲೇ ವಿಳಂಬ ಮಾಡದೆ ಮೀನುಗಾರಿಕೆಗೆ ಅನುವು ಮಾಡಿಕೊಡಲು ಡೀಸೆಲ್ ಪಾಸ್ ಪುಸ್ತಕದ ನವೀಕರಣ ಮಾಡಿ ಕೊಡಬೇಕೆಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಸರಕಾರವನ್ನು ಆಗ್ರಹಿಸುತ್ತದೆ. ಕೊರೊನಾ ಸಂಕಷ್ಟದ ಕಾಲದಲ್ಲಿಯೂ ಸರಕಾರ ಅಧಿಕಾರವನ್ನು ಉಳಿಸಿಕೊಳ್ಳುವತ್ತ ಚಿಂತಿಸುವುದೇ ಹೊರತು ಜನರ ಸಂಕಷ್ಟಗಳಿಗೆ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ.
ಬೋಟುಗಳಿಗೆ ಒಂದು ಟ್ರಿಪ್‌ಗೆ 4 ಸಾವಿರದಿಂದ 5 ಸಾವಿರ ಲೀಟರ್‌ವರೆಗೆ ಡೀಸೆಲ್ ವಿನಿಯೋಗವಾಗುತ್ತದೆ. ಈಗಾಗಲೇ ಸರಕಾರ ಡೀಸೆಲ್‌ಗೆ ಅತ್ಯಧಿಕ ಕರ ಹೇರಿ ಮೀನುಗಾರರು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕಳೆದ ಬಾರಿ 70 ರೂಪಾಯಿ ಇದ್ದ ಬೆಲೆ ಪ್ರಸ್ತುತ 98 ರೂಪಾಯಿಗೆ ನೆಗೆದಿದೆ. ಸರಕಾರದಿಂದ ಬರುವ ಸಬ್ಸಿಡಿ ಸೌಲಭ್ಯ ಪಡೆಯಲು ಪಾಸ್‌ಬುಕ್ ಕಡ್ಡಾಯವಾಗಿರುವುದರಿಂದ ಅದು ನವೀಕರಣಗೊಳಿಸದೆ ಸಬ್ಸಿಡಿ ಡೀಸೆಲ್ ಪಡೆಯಲು ಅಸಾಧ್ಯವಾಗಿದೆ. ಹಾಗೆಯೇ ಸರಕಾರದ ದ್ವಿಮುಖ ಸಂಹವನ ಸಾಧನವನ್ನು ಅಳವಡಿಸಲು ಆದೇಶಿಸಿದ್ದು, ಮೀನುಗಾರರು ಇದರ ಅಳವಡಿಕೆಗಾಗಿ ಸಮಯಾವಕಾಶದ ಬೇಡಿಕೆ ಸಲ್ಲಿಸಿದ್ದಾರೆ. ಈ ಯಂತ್ರೋಪಕರಣ ಅಳವಡಿಕೆ ಮಾಡಿದಲ್ಲಿ ಅದರ ಸರ್ವಿಸ್ ಸೆಂಟರ್‌ನ ಸೌಲಭ್ಯದ ಬಗ್ಗೆ ಸರಕಾರ ಗಮನಹರಿಸಬೇಕಾಗಿದೆ ಮತ್ತು ಸರಕಾರ ಲ್ಯಾಂಡಿಂಗ್ ಬರ್ತಿಂಗ್ ಶುಲ್ಕವನ್ನು 3500 ರಿಂದ 12 ಸಾವಿರದವರೆಗೆ ಏರಿಸಿರುವುದು ಅವೈಜ್ಞಾನಿಕ.
ಕರಾವಳಿ ಪ್ರದೇಶದ ಸಾವಿರಾರು ಕುಟುಂಬಗಳು ಮೀನುಗಾರಿಕೆಯನ್ನು ಅವಲಂಬಿಸಿ ಜೀವನ ನಡೆಸುವುದರಿಂದ ಸರಕಾರ ಶೀಘ್ರವಾಗಿ ಮೀನುಗಾರರ ಈ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿದೆ. ಕೋವಿಡ್-19 ಹಿನ್ನಲೆಯಲ್ಲಿ ಮೀನುಗಾರರು ಈಗಾಗಲೇ ತೀವ್ರ ಸಂಕಷ್ಟದಲ್ಲಿದ್ದು ಅವರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಬೇಕಾಗಿದೆ ಇಲ್ಲದೇ ಹೋದಲ್ಲಿ ಕರಾವಳಿಯ ಸಮಸ್ತ ಮೀನುಗಾರರ ಪರವಾಗಿ ಕಾಂಗ್ರೆಸ್ ಪಕ್ಷದಿಂದ ಹೋರಾಟ ಅನಿವಾರ್ಯ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹಾಗೂ ಜಿಲ್ಲಾ ಮೀನುಗಾರ ಕಾಂಗ್ರೆಸ್ ಸಂಘಟನೆಯ ಅಧ್ಯಕ್ಷರಾದ ಅಖಿಲೇಶ್ ಕೋಟ್ಯಾನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.