ಉಡುಪಿ: ಯಡಿಯೂರಪ್ಪನವರ ರಾಜೀನಾಮೆ, ರಾಜ್ಯದಲ್ಲಿ ಒಂದು ಹಂತದ ಅರಾಜಕತೆಯ ಆಡಳಿತದ ಯುಗಾಂತ್ಯಕ್ಕೆ ನಾಂದಿ ಹಾಡಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಯಡಿಯೂರಪ್ಪ ಒಬ್ಬ ಚಾಣಕ್ಯ ರಾಜಕಾರಣಿ. ಆದರೆ ಭ್ರಷ್ಟಾಚಾರರಹಿತ ಜನಪರ ಆಡಳಿತ ಕೊಡುತ್ತೇನೆ ಎಂದು ಹೇಳುತ್ತಲೇ, ತಾನು ಅನಿವಾರ್ಯವಾಗಿ ಸ್ವಜನ ಪಕ್ಷಪಾತದ, ಕೌಟುಂಬಿಕ ರಾಜಕಾರಣ ಒಂದೆಡೆಯಾದರೆ, ಆರ್.ಎಸ್.ಎಸ್ ಮೂಲಭೂತವಾದಿ ಸಿದ್ಧಾಂತದ ಗುಪ್ತ ಕಾರ್ಯಸೂಚಿಗೆ ತನ್ನನ್ನು ತಾನು ತೆರೆದುಕೊಳ್ಳದೆ ಇದ್ದದ್ದು, ಪಕ್ಷ ವರಿಷ್ಠರ ಅವಿಶ್ವಾಸಕ್ಕೆ ಕಾರಣವಾಗಿ ರಾಜೀನಾಮೆ ಕೊಡಬೇಕಾಗಿ ಬಂದಿರುವುದು ವಿಪರ್ಯಾಸ. ಇದು ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಕೊರೋನಾ ನಿರ್ವಹಣೆ, ಹಾಗೂ ನೆರೆ ಸಂತ್ರಸ್ತರ ನೆರವಿನಲ್ಲಿ ಸರಕಾರ ಸಂಪೂರ್ಣ ವಿಫಲಗೊಂಡಿತ್ತು. ಈ ಸರಕಾರಕ್ಕೆ ಜನಪರ ಚಿಂತನೆಯ ಕಾರ್ಯಸೂಚಿ ಇರಲಿಲ್ಲ. ವಾಸ್ತವದಲ್ಲಿ ಇಲ್ಲಿ ಸಾಂವಿಧಾನಿಕ ನಿಲುವನ್ನು ಮರೆತ, ಪಕ್ಷಾಂತರಿಗಳನ್ನು ಒಳಗೊಂಡ ಒಂದು ರೀತಿಯ ಸಮ್ಮಿಶ್ರ ಸರಕಾರ ಇತ್ತೆ ಹೊರತು ಬಿಜೆಪಿಯ ಸರಕಾರವಲ್ಲ. ಆ ನೆಲೆಯಲ್ಲಿ ರಾಜ್ಯದ ಹಿತದೃಷ್ಠಿಯಿಂದ ರಾಜ್ಯಪಾಲರು ಮಧ್ಯ ಪ್ರವೇಶಿಸಿ ಈ ಸರಕಾರವನ್ನು ವಜಾಗೊಳಿಸಿ ಹೊಸ ಸರಕಾರ ರಚನೆಗೆ ಅವಕಾಶ ಮಾಡಿಕೊಡಬೇಕು ಎಂದು ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.