ಉಡುಪಿ: ರೋಟರಿ ಉಡುಪಿಯ ಪದಪ್ರದಾನ ಸಮಾರಂಭವು ಉಡುಪಿಯ ಟೌನ್ ಹಾಲ್ ನ ಮಿನಿ ಸಭಾಂಗಣದಲ್ಲಿ ನಡೆಯಿತು. ರೋಟರಿ ವರ್ಷ 2021-22ರ ನೂತನ ಅಧ್ಯಕ್ಷರಾಗಿ ಹೇಮಂತ್ ಯು. ಕಾಂತ್, ಕಾರ್ಯದರ್ಶಿಯಾಗಿ ಜೆ. ಗೋಪಾಲಕೃಷ್ಣ ಪ್ರಭು ಅಧಿಕಾರ ಸ್ವೀಕರಿಸಿದರು. ರೋಟರಿ ಜಿಲ್ಲೆ 3182ರ ಮಾಜಿ ಗವರ್ನರ್ ಅಭಿನಂದನ್ ಶೆಟ್ಟಿ ಅವರು ಪದಪ್ರದಾನ ಕಾರ್ಯಕ್ರಮವನ್ನು ನೆರವೇರಿಸಿದರು.
ಅಸಿಸ್ಟೆಂಟ್ ಗವರ್ನರ್ ಡಾ. ಸುರೇಶ್ ಶೆಣೈ ಹಾಗೂ ವಲಯ ಸೇನಾನಿ ಅಮಿತ್ ಅರವಿಂದ್ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕ್ಲಬ್ ಬುಲೆಟಿನ್ ಕೋಂಚ್ ನ್ನು ಮತ್ತು ಸದಸ್ಯರಿಗಾಗಿ ರೋಟರಿಯ ಬಗ್ಗೆ ಕಿರುಪರಿಚಯವುಳ್ಳ ಮಾಹಿತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು. ನೂತನ ಅಧ್ಯಕ್ಷ ಹೇಮಂತ್ ಯು. ಕಾಂತ್ ಪದಸ್ವೀಕಾರ ಭಾಷಣ ಮಾಡಿದರಲ್ಲದೇ, ತನ್ನ ನೂತನ ತಂಡದ ಪರಿಚಯ ಮಾಡಿದರು.
ನಿಕಟಪೂರ್ವ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ ಸ್ವಾಗತಿಸಿ, ನಿಕಟಪೂರ್ವ ಕಾರ್ಯದರ್ಶಿ 2020-21ನೇ ಸಾಲಿನ ವಾರ್ಷಿಕ ವರದಿಯನ್ನು ವಾಚಿಸಿದರು. 5 ಮಂದಿ ನೂತನ ಸದಸ್ಯರಾಗಿ ಕ್ಲಬ್ ಗೆ ಸೇರ್ಪಡೆಗೊಂಡರಲ್ಲದೇ, 5 ಮಂದಿ ಸದಸ್ಯರು ಪಿ.ಎಚ್.ಎಫ್ ದೇಣಿಗೆಯನ್ನು ನೀಡಿದರು. ಬಡ ಮಧುಮೇಹಿ ರೋಗಿಗಳಿಗೆ ಉಚಿತ ಇನ್ಸುಲಿನ್ ವಿತರಿಸುವ ಕ್ಲಬ್ ನ ಖಾಯಂ ಯೋಜನೆಗೆ ದಾನಿಗಳಾದ ಟಿ. ಗುರುರಾಜ್ ಭಟ್ ಮತ್ತು ಅನ್ನಾ ಮರಿಯಾ ಮೋರಸ್ ನೀಡಿದ ದೇಣಿಗೆಯನ್ನು ಕ್ಲಬ್ ನ ವೈದ್ಯಕೀಯ ಯೋಜನೆಗಳ ಸಂಯೋಜಕ ಡಾ. ಪ್ರಭಾಕರ್ ಮಲ್ಯರಿಗೆ ಇದೇ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು.
ವನಿತಾ ಉಪಾಧ್ಯಾಯ ಪ್ರಾರ್ಥನೆಗೈದರು. ಕಾರ್ಯದರ್ಶಿ ಜೆ. ಗೋಪಾಲಕೃಷ್ಣ ಪ್ರಭು ವಂದಿಸಿದರು. ಜನಾರ್ದನ್ ಭಟ್ ಮತ್ತು ಚಂದ್ರಶೇಖರ್ ಅಡಿಗ ಕಾರ್ಯಕ್ರಮ ನಿರೂಪಿಸಿದರು.