ಬೆಂಗಳೂರು: (ಉಡುಪಿ ಬುಲೆಟಿನ್ ವರದಿ) ಕರ್ನಾಟಕ ಬಿಜೆಪಿಯ ಪವರ್ ಹೌಸ್ ಎಂದರೆ ಕಣ್ಣ ಮುಂದೆ ಬರುವುದು ಸಿಡಿಲಬ್ಬರದ ಭಾಷಣದ ಮೂಲಕ ವಿರೋಧ ಪಕ್ಷದವರ ಮನಸ್ಸನ್ನೂ ಗೆದ್ದ ಶ್ವೇತವಸ್ತ್ರಧಾರಿ ನಾಯಕ. ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಬೆಳೆದು ಭಾರತೀಯ ಜನಸಂಘ ನಂತರ ಭಾರತೀಯ ಜನತಾ ಪಕ್ಷ ಹೀಗೆ ನಿರಂತರ ಹೋರಾಟ, ಸಂಘಟನೆಯ ಮೂಲಕ ಸೈಕಲ್ ತುಳಿದು, ಪಾದಯಾತ್ರೆಯ ಮೂಲಕ ರಾಜ್ಯದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಬಲಿಷ್ಠಗೊಳಿಸಿದ ಈ ವ್ಯಕ್ತಿ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಬಿಜೆಪಿ 2 ಸ್ಥಾನಗಳನ್ನು ಗೆದ್ದುಕೊಂಡ ಸಂದರ್ಭದಲ್ಲಿ ವಿಧಾನಸೌಧ ಪ್ರವೇಶಿಸಿದ ಇಬ್ಬರಲ್ಲಿ ಇವರೂ ಒಬ್ಬರು. ಅಂದಿನಿಂದ ಇವರು ಭಾಷಣ ಮಾಡಿದರೆ ವಿಧಾನಸಭೆ ನಡುಗುತ್ತದೆ ಎಂಬ ರೀತಿಯಲ್ಲಿ ವರ್ಣನೆ ಮಾಡಲಾಗುತ್ತಿದ್ದು.
ಹೌದು, ಬಿ.ಎಸ್. ಯಡಿಯೂರಪ್ಪ ಅಂದರೆ ಕರ್ನಾಟಕ ಬಿಜೆಪಿಗೆ ಆಮ್ಲಜನಕ ಇದ್ದ ಹಾಗೆ. ಸತತ ಹೋರಾಟ, ಜನಸಂಪರ್ಕ ಇಟ್ಟುಕೊಂಡು ಮೊಟ್ಟಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೊಡುಗೆಯೇ ಹೆಚ್ಚು ಎಂದರೆ ಅತಿಶಯವಾಗದು. ತನ್ನ ಲಿಂಗಾಯತ ಮತ ಬ್ಯಾಂಕ್ ಭದ್ರವಾಗಿ ಕಾಪಿಟ್ಟುಕೊಂಡಿರುವ ಯಡಿಯೂರಪ್ಪರವರು ಇತರ ಸಮಾಜದವರ ಮನಸ್ಸನ್ನೂ ಗೆದ್ದ ಅಪರೂಪದ ನಾಯಕ. ತನ್ನ ವಿರುದ್ಧ ಆರೋಪ ಕೇಳಿಬಂದ ನಂತರ ದಿನಗಳಲ್ಲಿ ಬಿಜೆಪಿಯಿಂದ ಹೊರನಡೆದು ಕೆಜೆಪಿ ಪಕ್ಷ ಕಟ್ಟಿದ ಕೆಲ ಸಮಯದ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಹಲವಾರು ಕಡೆಗಳಲ್ಲಿ ಭಾರಿ ಅಂತರದಿಂದ ಸೋಲನ್ನು ಕಂಡಿತು. ಅಂದರೆ ಯಡಿಯೂರಪ್ಪ ಬಿಜೆಪಿಗೆ ಅತ್ಯವಶ್ಯಕ ಎಂಬ ಪರಿಸ್ಥಿತಿ ನಿರ್ಮಾಣವಾದ ಕಾರಣ ಮತ್ತೊಮ್ಮೆ ಯಡಿಯೂರಪ್ಪರವರು ಪಕ್ಷಕ್ಕೆ ಮರಳಿ ಬಂದಾಗ ಹೈಕಮಾಂಡ್ ಕೆಂಪು ಹಾಸಿನ ಸ್ವಾಗತ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನೇ ಯಡಿಯೂರಪ್ಪ ಅವರಿಗೆ ನೀಡುವ ಮೂಲಕ ಮತ್ತೊಮ್ಮೆ ಬಿ.ಎಸ್.ವೈ ಕಾಲಕ್ಕೆ ಚಕ್ರ ಕಟ್ಟಿಕೊಂಡು ನಾಡಿನ ಉದ್ದಗಲಕ್ಕೂ ಸಂಚರಿಸಿ ಬಿಜೆಪಿಗೆ ಬೂಸ್ಟರ್ ಡೋಸ್ ನೀಡಿ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಹಾದಿಗೆ ಮರಳಿತು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆಯಾಗುವಲ್ಲಿ ಯಡಿಯೂರಪ್ಪ ಮತ್ತವರ ತಂಡದ ಪ್ರಯತ್ನ ಬಹಳಷ್ಟಿತ್ತು. ಉತ್ತರ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಯಡಿಯೂರಪ್ಪ ಅಂದರೆ ಐಕಾನ್. ಇವರು ಹೇಳಿದ ಹಾಗೆ ಕೆಲವು ಸಮುದಾಯದವರು ನಡೆದುಕೊಳ್ಳುತ್ತಾರೆ. ರಾಜ್ಯಾದ್ಯಂತ ಸಂಖ್ಯೆಯಲ್ಲಿಯೂ ಹೆಚ್ಚಿರುವ ಲಿಂಗಾಯತ ಮತಬ್ಯಾಂಕ್ ಯಡಿಯೂರಪ್ಪ ಅವರ ಕೈಯಲ್ಲಿದೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಹೈಕಮಾಂಡ್ ನವರಿಗೂ ಚೆನ್ನಾಗಿ ಅರಿವಿದೆ. ಇದೇ ಕಾರಣಕ್ಕಾಗಿ ಯಡಿಯೂರಪ್ಪ ಅವರ ಮೇಲೆ ಹೈಕಮಾಂಡ್ ಗೆ ಅತೀವ ಗೌರವ.
ಆಗಸ್ಟ್ ಮೊದಲ ವಾರದಲ್ಲಿ ದೆಹಲಿಗೆ ಯಡಿಯೂರಪ್ಪ?
ಜುಲಾಯಿ 26ರಂದು ಶಾಸಕಾಂಗ ಪಕ್ಷದ ಸಭೆಯನ್ನು ಕರೆಯುವ ಸಾಧ್ಯತೆಯಿದ್ದು ಅಂದು ಎಲ್ಲಾ ಶಾಸಕರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಔತನಕೂಟವನ್ನು ಏರ್ಪಡಿಸಲಿದ್ದಾರೆ. ಆಗಸ್ಟ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಲಿದ್ದು ಬಳಿಕ ನೂತನ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆಗೆ ಇಂಧನ ಸಿಗಲಿದೆ. ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಕ್ರಿಯ ರಾಜಕಾರಣದ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಲಿದೆ.
ಕಾಗೇರಿಯವರೇ ಹಾಟ್ ಫೇವರಿಟ್!
ಮುಖ್ಯಮಂತ್ರಿ ಯಡಿಯೂರಪ್ಪರವರಿಗೆ ಈಗಾಗಲೇ ಇಳಿವಯಸ್ಸು. ಈ ವಯಸ್ಸಿನಲ್ಲಿ ಕೂಡ ಅವರ ಕ್ರಿಯಾಶೀಲತೆ, ಓಡಾಟದ ಕುರಿತು ಎರಡು ಮಾತಿಲ್ಲ ಎಂದು ಸ್ವತಃ ಹೈಕಮಾಂದ್ ಹೇಳಿದೆ. ಆದರೆ ಮುಂದಿನ ಚುನಾವಣೆಯ ದೃಷ್ಟಿಯಲ್ಲಿ ಮಾಸ್ ಲೀಡರ್ ಹುಡುಕಾಟದಲ್ಲಿ ಬಿಜೆಪಿ ಹೈಕಮಾಂಡ್ ಮಗ್ನವಾಗಿದೆ. ಇನ್ನುಳಿದ ಒಂದೂವರೆ ವರ್ಷದೊಳಗೆ ಹೊಸಮುಖ ಜನರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಶುದ್ಧಹಸ್ತದ ಉತ್ತರಾಧಿಕಾರಿ ಯಾರಾಗಬಹುದು ಎಂಬ ಪ್ರಶ್ನೆಗೆ ಹೈಕಮಾಂಡಿಗೆ ಬೇಗನೆ ಉತ್ತರ ಸಿಕ್ಕಿದೆ! ಬಿಜೆಪಿ ಉನ್ನತ ಮಟ್ಟದ ಜೊತೆಗೆ ಸಂಪರ್ಕವಿರುವ ಮೂಲಗಳ ಪ್ರಕಾರ ನೂತನ ಸಿಎಂ ರೇಸಿನಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿರುವ ಹೆಸರೆಂದರೆ ಈಗಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ.
ತನ್ನ ಸರಳ ವ್ಯಕ್ತಿತ್ವ, ಆಡಳಿತ ಜಾಣ್ಮೆ, ಸಮಚಿತ್ತ ಭಾವ, ಎಲ್ಲವನ್ನೂ ಸರಿದೂಗಿಸುವ ಚಾಣಾಕ್ಷತೆ, ಶುದ್ಧಹಸ್ತ ಮತ್ತು ಡಿಗ್ನಿಫೈಡ್ ವರ್ಚಸ್ಸಿನ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನಲೆಯಿಂದ ಬಂದಿರುವ ಕಾಗೇರಿಯವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೈಕಮಾಂಡಿಗೆ ಒಳ್ಳೆಯ ಅಭಿಪ್ರಾಯವಿದೆ ಮತ್ತು ನೂತನ ಮುಖ್ಯಮಂತ್ರಿಯಾಗಿ ಕಾಗೇರಿಯವರನ್ನೇ ನೇಮಿಸುವ ಸಾಧ್ಯತೆ ಬಹುತೇಕ ಖಚಿತವಾಗಿದೆ ಎಂಬ ಸುದ್ಧಿ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
ಬಿ.ವೈ. ವಿಜಯೇಂದ್ರ ಅವರನ್ನು ಉಪಮುಖ್ಯಮಂತ್ರಿ ಅಥವಾ ಗೃಹ ಸಚಿವರನ್ನಾಗಿ ಮಾಡುವ ಮೂಲಕ ಲಿಂಗಾಯತ ಮತಬ್ಯಾಂಕನ್ನು ಕೈಯಿಂದ ಜಾರಿ ಹೋಗದ ಹಾಗೆ ಬಿಜೆಪಿ ಎಚ್ಚರಿಕೆಯ ಹೆಜ್ಜೆಯನ್ನು ಇಡಲಿದೆ.
ರಾಜ್ಯಪಾಲರಾಗಿ ಬಿ.ಎಸ್.ವೈ?
ರಾಜೀನಾಮೆಯ ಬಳಿಕ ಬಿ.ಎಸ್. ಯಡಿಯೂರಪ್ಪ ರವರನ್ನು ರಾಜ್ಯಪಾಲರಾಗಿ ನೇಮಿಸುವ ಸಾಧ್ಯತೆಯಿದೆ. ಇದಕ್ಕೆ ಯಡಿಯೂರಪ್ಪರವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.