ಲಾಕ್ ಡೌನ್ ಸಂದರ್ಭದಲ್ಲಿ ಮುಚ್ಚಲ್ಪಟ್ಟಿದ್ದ ವೈದ್ಯಕೀಯ ಕಾಲೇಜುಗಳ ಪುನರಾರಂಭಕ್ಕೆ ರಾಜ್ಯ ಸರ್ಕಾರ ಹಸಿರು ನಿಶಾನೆ ನೀಡಿದೆ. ಶುಕ್ರವಾರ ಈ ಬಗ್ಗೆ ಆದೇಶ ಹೊರಡಿಸಿದ ಸರಕಾರ, ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಶೈಕ್ಷಣಿಕ ಸಂಸ್ಥೆಗಳಾದ ವೈದ್ಯಕೀಯ / ದಂತ ವೈದ್ಯಕೀಯ ಕಾಲೇಜುಗಳು, ಆಯುಷ್, ನರ್ಸಿಂಗ್ ಕಾಲೇಜುಗಳು ಮತ್ತು ಇತರ ಅಲೈಡ್ ಹೆಲ್ತ್ ಕೇರ್ ಶೈಕ್ಷಣಿಕ ಕಾಲೇಜುಗಳನ್ನು ತೆರೆಯಲು ರಾಜ್ಯ ಸರಕಾರ ಅನುಮತಿ ನೀಡಿದೆ.
ಕನಿಷ್ಠ ಒಂದು ಡೋಸ್ ಲಸಿಕೆ ಪಡೆದ ವಿದ್ಯಾರ್ಥಿಗಳು, ಬೋಧಕ ಬೋಧಕೇತರ ಸಿಬ್ಬಂದಿಗಳು ಮಾತ್ರ ಕಾಲೇಜಿಗೆ ಹಾಜರಾಗಬಹುದು. ಕಾಲೇಜುಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸರ್ಕಾರ ಆದೇಶಿಸಿದೆ.
ಪದವಿ ಕಾಲೇಜುಗಳ ಆರಂಭಕ್ಕೆ ಶೀಘ್ರ ನಿರ್ಧಾರ?
ಮೂಲಗಳ ಪ್ರಕಾರ ಜುಲಾಯಿ ಕೊನೆಯ ವಾರ ಅಥವಾ ಆಗಸ್ಟ್ ಮೊದಲ ವಾರದೊಳಗೆ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳನ್ನು ಆರಂಭಿಸಲು ರಾಜ್ಯ ಸರಕಾರ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆಗಳಿವೆ. ಕನಿಷ್ಠ ಒಂದು ಡೋಸ್ ಲಸಿಕೆ ಪಡೆದುಕೊಂಡವರಿಗೆ ಮಾತ್ರ ಆಫ್ ಲೈನ್ ತರಗತಿಗಳಿಗೆ ಹಾಜರಾಗಲು ಅನುಮತಿ ನೀಡುವ ಸಾಧ್ಯತೆಗಳಿದ್ದು ಮೊದಲು ಬಾಕಿಯಿರುವ ಪರೀಕ್ಷೆ ಸಾಧ್ಯತೆಯಿದ್ದು, ನಂತರ ತರಗತಿಗಳನ್ನು ಆರಂಭಿಸುವ ಯೋಚಯಿದೆ.
ಈಗಾಗಲೇ ಆನ್ ಲೈನ್ ಮೂಲಕ ನಿರಂತರವಾಗಿ ತರಗತಿಗಳು ನಡೆಯುತ್ತಿದ್ದು ಕೊರೊನಾ ಸೋಂಕು ಕಡಿಮೆಯಾಗಿ ನಿಯಂತ್ರಣಕ್ಕೆ ಬಂದಲ್ಲಿ ಜುಲೈ ಅಂತ್ಯದೊಳಗೆ ಬಹುತೇಕ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಆಫ್ ಲೈನ್ ತರಗತಿಗಳು ಆರಂಭವಾಗುವ ಸಾಧ್ಯತೆಗಳಿವೆ.