ಉಡುಪಿ ಜಿಲ್ಲೆ ಪ್ರಜ್ಞಾವಂತ ಜನರು ಜಿಲ್ಲೆ. ಪ್ರತಿ ಬಾರಿಯೂ ಚುನಾವಣೆಗಳಲ್ಲಿ ಯಾವುದಾದರೂ ಪಕ್ಷಕ್ಕೆ ಸಂಪೂರ್ಣವಾಗಿ ಜಿಲ್ಲಾದ್ಯಂತ ಬಹುಮತ ನೀಡಿ ಬಿಡುತ್ತದೆ. ಹೋದ ಸಲ ಕಾಂಗ್ರೆಸ್ ಇತ್ತು ಈ ಬಾರಿ ಬಿಜೆಪಿ ಇದೆ. ಈ ಬಾರಿಯ ವಿಶೇಷತೆ ಏನೆಂದರೆ ಸ್ಥಳೀಯವಾಗಿಯೂ ಬಿಜೆಪಿ ರಾಜ್ಯದಲ್ಲೂ ಬಿಜೆಪಿ ಕೇಂದ್ರದಲ್ಲೂ ಬಿಜೆಪಿ. ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಮತ ನೀಡಿದ ಮತದಾರ ತನ್ನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜ. ಅದರಲ್ಲಿಯೂ ಉಡುಪಿ ಜಿಲ್ಲೆಯ ಲೋಕಸಭಾ ಸದಸ್ಯರೊಬ್ಬರು ಕೇಂದ್ರದಲ್ಲಿ ಕೃಷಿ ಮಂತ್ರಿಗಳಾಗಿದ್ದರು ಎನ್ನುವಾಗ ದೇಶದ ಪ್ರಧಾನಿ ಹಾಗೂ ಆರೋಗ್ಯ ಸಚಿವರನ್ನು ಮನವೊಲಿಸಿದರೆ ಖಂಡಿತವಾಗಿಯೂ ಇಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ತೆರೆಯುವುದರಲ್ಲಿ ಯಶಸ್ವಿಯಾಗಬಹುದು.
ಯಾಕೆ ವೈದ್ಯಕೀಯ ಕಾಲೇಜು ಅನ್ನುವುದನ್ನು ಮೊದಲು ಹೇಳುತ್ತೇನೆ. ಇನ್ನೂ ಪ್ರತೀವಾರ ಒಂದೊಂದು ಅಂಕಣ ವೈದ್ಯಕೀಯ ಕಾಲೇಜು ಬರುವವರೆಗೆ ಬರೆಯಬೇಕು ಎಂದುಕೊಂಡಿದ್ದೇನೆ. ಜನಸಾಮಾನ್ಯರು ಕೂಡ ಈ ಆಂದೋಲನದಲ್ಲಿ ಸೇರಿಕೊಳ್ಳಿ. ಇದು ಪಕ್ಷಾತೀತ ಆಂದೋಲನವಾಗಲಿ. ಇಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದವಿಲ್ಲ. ರಾಜಕೀಯ ವ್ಯಕ್ತಿಗಳು ಕೂಡ ಸೇರಿಕೊಳ್ಳಬಹುದು. ಈ ಜನಾಂದೋಲನದ ಮೊದಲ ಹೆಜ್ಜೆ ಯಾಕೆ ವೈದ್ಯಕೀಯ ಕಾಲೇಜು ಬೇಕು ಎಂದು ಸರಿಯಾಗಿ ಅರ್ಥಮಾಡಿಕೊಳ್ಳುವುದು. ಇದನ್ನು ನಾನು ಸಾಮಾಜಿಕ ಜಾಲತಾಣಗಳ ಮುಖಾಂತರ ಮಾಡುವೆ. ಆಸಕ್ತಿ ಇರುವ ವೈದ್ಯರುಗಳು ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಬರೆಯಿರಿ. ಹಲವು ಜನ ಸಾಮಾಜಿಕ ಕಾರ್ಯಕರ್ತರು ಇದ್ದೀರಿ ನೀವು ಕೂಡ ಸೇರಿಕೊಳ್ಳಿ. ಯಾವುದೇ ಕುಹಕಕ್ಕೆ ಅವಕಾಶವಿಲ್ಲ. ನಮ್ಮ ಜನಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುವಂತೆ ಮಾಡುವುದು ನಮ್ಮೆಲ್ಲರ ಹಕ್ಕು. ವೈದ್ಯಕೀಯ ಕಾಲೇಜು ಎಲ್ಲಿ ಮಾಡುವುದು ಅದು ಸರ್ಕಾರ ನಿರ್ಧರಿಸಲಿ. ನನಗನ್ನಿಸುವಂತೆ ಬ್ರಹ್ಮಾವರದಿಂದ ಬೈಂದೂರುವರೆಗೆ ಎಲ್ಲಿಯಾದರೂ ಒಂದು ಕಡೆ ಮಾಡಿದರೆ ಉತ್ತಮ.
ಉಡುಪಿ ಜಿಲ್ಲೆಯ ಖಾಸಗಿ ಹಿತಾಶಕ್ತಿಗಳು ವೈದ್ಯಕೀಯ ಕಾಲೇಜನ್ನು ವಿರೋಧಿಸುತ್ತಿದ್ದಾರೆ ಎನ್ನುವುದು ಅಪ್ಪಟ ಸುಳ್ಳು. ಇದು ಕೆಲಸ ಮಾಡಲು ಇಷ್ಟವಿಲ್ಲದ ಕೆಲವು ರಾಜಕಾರಣಿಗಳು ತೇಲಿಬಿಡುವ ಸುಳ್ಳು ಹೊರತು ಇದರಲ್ಲಿ ಯಾವುದೇ ನಿಜಾಂಶವಿಲ್ಲ. ಶರತ್ ಕುಮಾರ್ ಪರ ಆಂದೋಲನ, ಹಾಜಿ ಅಬ್ದುಲ್ಲಾ ಆಸ್ಪತ್ರೆ ಖಾಸಗೀಕರಣ ವಿರೋಧಿ ಆಂದೋಲನ ಇವೆಲ್ಲವೂ ನಾವು ತೆಗೆದುಕೊಂಡ ನಿಲುವುಗಳು ಸರಿ ಎನ್ನುವುದು ಫಲಿತಾಂಶದಿಂದ ಗೊತ್ತಾಗಿದೆ. ಇವೆಲ್ಲದಕ್ಕೂ ಕಾರಣ ಆದದ್ದು ಸಾಮಾಜಿಕ ಜಾಲತಾಣಗಳಿಂದ ಮೂಡಿಸಿದ ಅರಿವು. ಹಾಗೆಯೇ ಸಮಾಜದ ಯುವಕರುಗಳು ನಮಗೆ ನೀಡಿದ ಬೆಂಬಲ. ಇದೇ ಯುವಕರುಗಳನ್ನು ನಂಬಿಕೊಂಡು ಈ ಪಕ್ಷಾತೀತ ಆಂದೋಲನವನ್ನು ಇವತ್ತಿನಿಂದ ಪ್ರಾರಂಭಿಸುತ್ತಿದ್ದೇನೆ. ನಿಮ್ಮ ನಿಲುವುಗಳನ್ನು ದಯವಿಟ್ಟು ತಿಳಿಸಿ. ಯಾರ ಮೇಲೆಯೂ ವೈಯಕ್ತಿಕ ದ್ವೇಷ ಬೇಡ.
ಉಡುಪಿ ಜಿಲ್ಲೆಯಲ್ಲಿ ಈಗ ಇರುವ ಜಿಲ್ಲಾ ಆಸ್ಪತ್ರೆ: ಕೇವಲ ನೂರೈವತ್ತು ಬೆಡ್ ಗಳ ಆಸ್ಪತ್ರೆ. ಉಡುಪಿಯ ಶಾಸಕರು ಈ ಬಾರಿ 160 ಕೋಟಿ ರೂಪಾಯಿಯ ಪ್ರಾಜೆಕ್ಟ್ ಒಂದನ್ನು ಸಂಪುಟದಿಂದ ಅನುಮೋದನೆ ಪಡೆದಿದ್ದಾರೆ. ಅದು ಪ್ರಾರಂಭವಾಗುತ್ತದೆ ಎಂದು ನಾವೆಲ್ಲ ಕಾಯುತ್ತ ಕೂತಿದ್ದೆವೇ. ಜಿಲ್ಲಾಸ್ಪತ್ರೆ ಆದರೆ ಇನ್ನೂರ ಐವತ್ತು ಬೆಡ್ ಗಳು ಬರುತ್ತವೆ. ಒಟ್ಟಿನಲ್ಲಿ ನಾನೂರು ಹಾಸಿಗೆಗಳ ಆಸ್ಪತ್ರೆ. ಪಕ್ಕದ ವೆನ್ಲಾಕ್ ಆಸ್ಪತ್ರೆಯನ್ನು ನೋಡಿ, ಅದು ಕೂಡ ನಮ್ಮ ಉಡುಪಿ ಆಸ್ಪತ್ರೆಗಿಂತ ಸುಸಜ್ಜಿತವಾದ ಆಸ್ಪತ್ರೆ. ಆದರೆ ಅಲ್ಲಿ ಸರ್ಕಾರಿ ವೈದ್ಯರ ಕೊರತೆ ಇರುವುದರಿಂದ ಖಾಸಗಿ ಕೆಎಂಸಿ ಆಸ್ಪತ್ರೆಯ ವೈದ್ಯರುಗಳು ಬರುತ್ತಿದ್ದಾರೆ. ಅಂದರೆ ಸರ್ಕಾರಕ್ಕೆ ಏನೇ ಮಾಡಿದರೂ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡಲು ವೈದ್ಯರು ಸಿಗುವುದಿಲ್ಲ. ಅದೇ ವೈದ್ಯಕೀಯ ಕಾಲೇಜು ಆಯಿತೆಂದರೆ ಉಡುಪಿಯಂಥ ಸ್ಥಳದಲ್ಲಿ ಖಂಡಿತವಾಗಿ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡಲು ವೈದ್ಯರುಗಳು ಸಿಕ್ಕೇ ಸಿಗುತ್ತಾರೆ. ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುವುದು ಯುವ ವೈದ್ಯರು ಗಳಿಗೆ ಹೆಚ್ಚು ಆಕರ್ಷಣೀಯ. ಹಾಗೆಯೇ ವೈದ್ಯಕೀಯ ಕಾಲೇಜು ಬೆಳೆದಂತೆಲ್ಲಾ ಆಲ್ಲಿ ಸ್ನಾತಕೋತ್ತರ ಪದವಿ ಇದರ ಶಿಕ್ಷಣ ಪ್ರಾರಂಭವಾಗುತ್ತದೆ. ಹಾಗೆ ಪ್ರತಿಯೊಂದು ವಿಷಯದಲ್ಲೂ ಹಲವಾರು ವೈದ್ಯಕೀಯ ಯೂನಿಟ್ ಗಳು ಬರುತ್ತವೆ. 1ಯೂನಿಟ್ ಎಂದರೆ ಒಬ್ಬ ಪ್ರೊಫೆಸರ್ ಒಬ್ಬ ರೀಡರ್ ಮತ್ತೊಬ್ಬ ಅಸಿಸ್ಟೆಂಟ್ ಪ್ರೊಫೆಸರ್ ಹಾಗೆಯೇ ಒಬ್ಬ ಸೀನಿಯರ್ ರೆಸಿಡೆಂಟ್. ಹೀಗೆ ನೋಡಿಕೊಳ್ಳುವ ವೈದ್ಯರ ಸಂಖ್ಯೆ ಜಾಸ್ತಿಯಾಗುತ್ತದೆ. ಇದನ್ನು ನೀವು ಜಿಲ್ಲಾಸ್ಪತ್ರೆಯಲ್ಲಿ ನೋಡಲು ಆಗುವುದಿಲ್ಲ.
ಜಿಲ್ಲಾಸ್ಪತ್ರೆ ನಿಂತ ನೀರು. ಇದು ನಾನು ಕಣ್ಣಾರೆ ಕಂಡ ಅನುಭವ. ಹಿರಿಯ ವೈದ್ಯರೊಬ್ಬರು ಹೇಳುವಂತೆ, ಜಿಲ್ಲಾಸ್ಪತ್ರೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಬರುವ ಕೇಸ್ ಗಳಿಗೆ ಚಿಕಿತ್ಸೆ ಕೊಡಲು ಕಷ್ಟವಾಗುತ್ತಿದೆ. ಅವುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗೆ ಹೋದ ಕೂಡಲೇ ಡಯಗ್ನೋಸಿಸ್ ಏನಾದರೂ ಬದಲಾದರೆ, ಕೋಡ್ ಬದಲಾದರೆ ಖಂಡಿತವಾಗಿಯೂ ಇದರೊಂದಿಗೆ ಆಯುಷ್ಮಾನ್ ಭಾರತ್ ಯೋಜನೆಯ ಅನುಮೋದನೆ ಕೂಡ ಹೋಗುತ್ತದೆ. ಈ ಬಗ್ಗೆ ನಮ್ಮ ಸ್ವಯಂಸೇವಕರಲ್ಲಿ ಒಬ್ಬರಾದ ಸುಕೇಶ್ ಶೆಟ್ಟಿ ಬಹಳಷ್ಟು ಸಾರಿ ನನ್ನ ಗಮನಕ್ಕೆ ತಂದಿದ್ದಾರೆ. ಹಲವು ಸಾಮಾಜಿಕ ಕಾರ್ಯಕರ್ತರಿಗೂ ತಿಳಿದ ವಿಷಯ. ಸರ್ಕಾರಿ ವೈದ್ಯಕೀಯ ಕಾಲೇಜು, ಅಲ್ಲಿ ಕಲಿಯುವ ವೈದ್ಯರು, ಅವರಿಗೆ ಪಾಠ ಮಾಡುವ ಪ್ರಾಧ್ಯಾಪಕರು. ಇಂತಹ ಸನ್ನಿವೇಶಗಳಲ್ಲಿ ಕೈಯಲ್ಲಿ ಆದ ಉಚಿತ ಚಿಕಿತ್ಸೆಯನ್ನು ಕೊಡುವ ಸಾಧ್ಯತೆ ಇದೆ.
ಕೊನೆಯದಾಗಿ ಹೇಳುವುದಾದರೆ ವೈದ್ಯಕೀಯ ಕಾಲೇಜು ಬಂದಲ್ಲಿ ನಮ್ಮ ಜಿಲ್ಲೆಯ ಜನರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಅದರಲ್ಲಿಯೂ ಅರ್ಹ ಜನರಿಗೆ ಬಹಳ ಉತ್ತಮವಾಗುತ್ತದೆ. ಹೆಚ್ಚು ಹೆಚ್ಚು ವೈದ್ಯರು ಸಿಗುತ್ತಾರೆ. ವೈದ್ಯಕೀಯ ಕ್ಷೇತ್ರ ಮುಂದುವರಿಯುತ್ತದೆ.
ಡಾ ಪಿ.ವಿ ಭಂಡಾರಿ
ಲೇಖಕರ ಪರಿಚಯ: ಲೇಖಕರು ಖ್ಯಾತ ಮನೋವೈದ್ಯರು