ಏಕವ್ಯಕ್ತಿ ಪ್ರದರ್ಶನವಾಗಿರುವ ಕೇಂದ್ರ ಸಚಿವ ಸಂಪುಟದ ವಿಸ್ತರಣೆಗೆ ಯಾವ ಮಹತ್ವವೂ ಇಲ್ಲ ಎಂದು ವಿರೋಧ ಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ. ಮೋದಿಯವರ ಸಂಪುಟದಲ್ಲಿ ಯಾರು ಸಚಿವರಾದರೂ ಅವರೆಲ್ಲರೂ ಹೆಸರಿಗೆ ಮಾತ್ರ. ಹಣಕಾಸು, ಆರೋಗ್ಯ, ಶಿಕ್ಷಣ, ವಿದೇಶಾಂಗ ಯಾವುದೇ ಖಾತೆ ಇರಲಿ, ಅವುಗಳಿಗೆ ಸಂಬಂಧಿಸಿದ ನೀತಿ ನಿರ್ಧಾರಗಳನ್ನು ಪ್ರಕಟಿಸುವುದು ಮತ್ತು ಅದರ ಬಗ್ಗೆ ಮಾತನಾಡುವುದು ಪ್ರಧಾನಿ ನರೇಂದ್ರ ಮೋದಿಯವರೇ ಆಗಿರುವ ಕಾರಣ ಆ ಖಾತೆಗಳ ವೈಫಲ್ಯಕ್ಕೆ ಅವರೇ ಹೊಣೆ ಹೊರಬೇಕಾಗುತ್ತದೆ.
ಹಿಂದಿನ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಸ್ವತ: ವೈದ್ಯರಾಗಿದ್ದರೆ, ಹೊಸ ಆರೋಗ್ಯ ಸಚಿವ ಮನಸೂಕ್ ಮಾಂಡವೀಯ ರಾಜಕೀಯ ಶಾಸ್ತ್ರದಲ್ಲಿ ಪದವೀಧರ. ಕೋರೊನಾ ಕಾಲದಲ್ಲಿ ಆರೋಗ್ಯ ಖಾತೆಯಲ್ಲಿಯೇ ಕೈತುಂಬ ಕೆಲಸ ಇರುವಾಗ ಹೊಸ ಆರೋಗ್ಯ ಸಚಿವರಿಗೆ ಹೆಚ್ಚುವರಿಯಾಗಿ ರಾಸಾಯಾನಿಕ ಮತ್ತು ರಸಗೊಬ್ಬರ ಖಾತೆಯನ್ನು ನೀಡಲಾಗಿದೆ. ಇವರಿಂದ ಯಾವ ಸಾಧನೆಯನ್ನು ನಿರೀಕ್ಷಿಸಬಹುದು?
ಬಹಳ ಮಂದಿ ಸಚಿವರನ್ನು ಕೈಬಿಟ್ಟಿರುವ ಸುದ್ದಿ ಕೇಳಿಯೇ ಅವರೆಲ್ಲ ಸಂಪುಟದಲ್ಲಿದ್ದರೆಂದು ದೇಶದ ಜನರಿಗೆ ಗೊತ್ತಾಗಿರುವುದು. ಈಗ ಹೊಸದಾಗಿ ಸೇರ್ಪಡೆಯಾದ ಸಚಿವರದ್ದೂ ಇದೇ ಕತೆ. ಇವರಲ್ಲಿ ಬಹಳಷ್ಟು ಮಂದಿ ಹೊಸಬರು. ದೇಶ ಎದುರಿಸುತ್ತಿರುವ ಇಂದಿನ ಸಂಕಷ್ಟದ ಕಾಲದಲ್ಲಿ ಈ ಹೊಸಬರನ್ನು ಕಟ್ಟಿಕೊಂಡು ಮೋದಿಯವರು ಏನು ಮಾಡುತ್ತಾರೋ ಗೊತ್ತಿಲ್ಲ.
ಈ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮೋದಿಯವರು ಸೋಷಿಯಲ್ ಎಂಜನಿಯರಿಂಗ್ ಮಾಡಿದ್ದಾರೆ, ಸಾಮಾಜಿಕ ನ್ಯಾಯವನ್ನು ಪಾಲಿಸಿದ್ದಾರೆ ಎಂದೆಲ್ಲ ವ್ಯಾಖ್ಯಾನಗಳು ಕೇಳಿ ಬರುತ್ತಿವೆ. ಕರ್ನಾಟಕದಿಂದ ಆರು ಮಂದಿ ಈಗ ಕೇಂದ್ರ ಸಚಿವರಾಗಿದ್ದಾರೆ. ಕರ್ನಾಟಕದಿಂದ ಸಚಿವರ ಆರಾಗಲಿ, ಹನ್ನೆರಡಾಗಲಿ ಅದರಿಂದ ರಾಜ್ಯಕ್ಕೆ ಏನೂ ಲಾಭವಾಗದು ಎನ್ನುವುದು ಈಗಾಗಲೇ ಸಾಬೀತಾಗಿದೆ. ಹೊಸಬರಲ್ಲಿ ಯಾರೂ ಸಂಪುಟ ದರ್ಜೆಯ ಸಚಿವರಿಲ್ಲ. ಮಹತ್ವದ ಖಾತೆಗಳೂ ಇಲ್ಲ. ಮಹತ್ವದ ಖಾತೆಗಳನ್ನು ಕೊಟ್ಟರೂ ಇವರಿಗೆ ನಿಭಾಯಿಸುವ ಸಾಮರ್ಥ್ಯವೂ ಇಲ್ಲ ಎಂದು ನರೇಂದ್ರ ಮೋದಿಯವರಿಗೆ ಗೊತ್ತಾಗಿರಬೇಕು.
ಆದ್ದರಿಂದ ಈ ಸಂಪುಟ ವಿಸ್ತರಣೆ, ಪುನಾರಚನೆಯಿಂದ ರಾಜ್ಯಕ್ಕೆ ಯಾವ ಲಾಭವೂ ಇಲ್ಲ. 25 ಸಂಸದರು ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ಹೀಗಿರುವಾಗ ಹೊಸದಾಗಿ ಸಚಿವ ಖಾತೆಯ ಕಿರೀಟ ಇಟ್ಟುಕೊಂಡು ಇವರೇನು ಮಾಡಬಹುದು? ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.