ಶಿಷ್ಯನಿಗೆ ಗುರುಗಳು ಹೇಳುತ್ತಿದ್ದ ಮಾತು ನೆನಪಾಯಿತು. ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೆ ಗಂಗೆ ಇದ್ದರೆ, ಸಿಂಧುವಿದ್ದರೆ, ಗಿರಿ ಹಿಮಾಲಯವಿದ್ದರೆ ವೇದವಿದ್ದರೆ, ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ?
ಒಂದು ಊರಿನ ಆಶ್ರಮವೊಂದರಲ್ಲಿ ಒಬ್ಬ ಗುರುಗಳು ತಮ್ಮ ಶಿಷ್ಯಂದಿರ ಜೊತೆ ವಾಸವಾಗಿದ್ದರು. ಊರಿನ ಸಹಸ್ರಾರು ಜನರ ಸಮಸ್ಯೆಗಳನ್ನು ಪರಿಹರಿಸುತ್ತಾ ಊರಿನಲ್ಲಿ ಶಾಂತಿ ನೆಮ್ಮದಿ ಇರುವಂತೆ ಮಾಡಿದ್ದರಿಂದ ಆ ಗುರುಗಳು ದೈವಾಂಶ ಸಂಭೂತರೂ ಮಹಾಜ್ಞಾನಿಗಳು ಎಂದು ಹೆಸರು ಪಡೆದಿದ್ದರು. ಆ ಬಗೆಗೆ ಅವರ ಶಿಷ್ಯರಿಗೆ ಬಹಳ ಹೆಮ್ಮೆ ಇದ್ದಿತ್ತು. ಅದೊಂದು ದಿನ ಗುರುಗಳು ತಾವು ಒಂದಷ್ಟು ಕಾಲ ಹಿಮಾಲಯ ಯಾತ್ರೆಗೆ ಹೋಗುತ್ತಿದ್ದೇನೆ. ಕೆಲವು ತಿಂಗಳ ಬಳಿಕವಷ್ಟೇ ನಾನು ಮರಳಿ ಬರುತ್ತೇನೆ. ಅಲ್ಲಿಯವರೆಗೆ ಈ ಆಶ್ರಮವನ್ನು ಮತ್ತು ಊರನ್ನು ಜತನದಿಂದ ನೋಡಿಕೊಳ್ಳಿ. ನನ್ನ ಆಶೀರ್ವಾದ ನಿಮ್ಮೊಂದಿಗೆ ಸದಾ ಇರುತ್ತದೆ ಎಂದು ತಮ್ಮ ಶಿಷ್ಯಂದಿರಿಗೆ ಹೇಳಿ ಹೊರಟು ಹೋದರು.
ಕೆಲವು ದಿನಗಳ ಬಳಿಕ ಬೇರೆ ಪ್ರದೇಶದಿಂದ ಒಂದಷ್ಟು ಜನ ಈ ಊರಿಗೆ ಬಂದು ಅಲ್ಲಿಯೇ ವಾಸಿಸತೊಡಗಿದರು. ಸಹಕಾರ, ಸಮನ್ವಯತೆ, ಸಹೋದರತೆಯ ಭಾವದಿಂದ ಊರಿನ ಜನ ಕೂಡ ಅವರ ಜೊತೆ ಹೊಂದಿಕೊಂಡರು. ಆದರೆ ಬರುಬರುತ್ತಾ ಬೇರೆ ಜಾಗದಿಂದ ಬಂದ ಜನ ಪ್ರಾಬಲ್ಯ ಮೆರೆಯಲು ತೊಡಗಿದರು. ಊರಿನ ಜನರ ಮೇಲೆ ತಮ್ಮ ಧಾರ್ಮಿಕ ವಿಚಾರಗಳನ್ನು ಹೇರತೊಡಗಿದರು. ಅನವಶ್ಯಕವಾಗಿ ಕಿರುಕುಳ ನೀಡತೊಡಗಿದರು. ಊರಿನ ಜನ ಗುರುಗಳ ಶಿಷ್ಯರ ಬಳಿ ಬಂದು ಸಮಸ್ಯೆಯನ್ನು ನಿವೇದಿಸಿಕೊಂಡರು. ಆಗ ಶಿಷ್ಯರು, ‘ಹೆದರಬೇಡಿ ನಮಗೆ ಗುರುಗಳ ಆರ್ಶೀವಾದವಿದೆ. ಈ ಊರಿಗೆ ಗುರುಗಳ ಶ್ರೀರಕ್ಷೆಯಿದೆ. ನೀವು ಸುಮ್ಮನಿರಿ. ಅವರು ಸುಮ್ಮನಾಗುತ್ತಾರೆ.’ ಎಂದು ಹೇಳಿ ಸಮಾಧಾನಿಸಿ ಕಳುಹಿಸಿದರು. ಆದರೆ ಸ್ವಲ್ಪ ಕಾಲದಲ್ಲಿಯೇ ಆ ಅನ್ಯ ಜನರಿಂದಾಗಿ ಇಡೀ ಊರು ಹೊತ್ತಿ ಉರಿಯತೊಡಗಿ ಭಯಾನಕ ರಕ್ತಪಾತಗಳು ನಡೆದು ಕೊನೆಗೆ ಇಡೀ ಊರು ಅನ್ಯ ಜನರಿಂದಲೇ ತುಂಬಿ ಹೋಯಿತು.
ಕೊನೆಗೊಂದು ದಿನ ಆ ಜನ ಆಶ್ರಮದ ಮೇಲೂ ದಾಳಿಯಿಟ್ಟರು. ಶಿಷ್ಯವೃಂದವನ್ನು ಸಾಮೂಹಿಕವಾಗಿ ಕೊಲೆಗೈಯಲಾಯಿತು. ಆಶ್ರಮವನ್ನು ಧ್ವಂಸ ಮಾಡಲಾಯಿತು. ಒಬ್ಬ ಶಿಷ್ಯ ಮಾತ್ರ ಅದು ಹೇಗೋ ತಪ್ಪಿಸಿಕೊಂಡು ಊರೂರು ತಿರುಗತೊಡಗಿದ. ಹಾಗೆ ದಿಕ್ಕು ದೆಸೆಯಿಲ್ಲದೆ ತಿರುಗಾಡುತ್ತಿದ್ದ ಶಿಷ್ಯನಿಗೆ ಹಳೆಯ ಗುರುಗಳು ದಾರಿಯಲ್ಲಿ ಸಿಕ್ಕರು. ಶಿಷ್ಯ ನಮಿಸಿ ಕೇಳಿದ. `ಅಲ್ಲಾ ಗುರುಗಳೆ ನೀವು ಆಶೀರ್ವಾದ ಇರುತ್ತದೆ ಎಂದಿದ್ದಿರಿ. ಆದರೆ ನಿಮ್ಮನ್ನೇ ನಂಬಿದ ತಪ್ಪಿಗೆ ಇಡೀ ಊರಿನ ಜನ ಬಲಿಯಾದರಲ್ಲಾ!’ ಎಂದು ಆರೋಪಿಸಿದ. ಗುರುಗಳು ಸುದ್ದಿ ತಿಳಿದು ಬೇಸರಗೊಂಡು ಹೇಳಿದರು. `ಶಿಷ್ಯ ಆಶೀರ್ವಾದ ರಕ್ಷೆ ಎಲ್ಲವೂ ನಿಮ್ಮ ಜೊತೆಯಲ್ಲಿಯೇ ಇತ್ತು. ಆದರೆ ನೀವು ನಿಮ್ಮ ಜವಾಬ್ದಾರಿಯನ್ನು ಮರೆತಿರಿ. ಪ್ರಥಮ ಹಂತದಲ್ಲೇ ಅನ್ಯ ಜನರ ಕೆಟ್ಟ ಕೆಲಸಗಳನ್ನು ನೀವು ವಿರೋಧಿಸುವ ಧೈರ್ಯ ತೋರಿದ್ದರೆ ಇವತ್ತು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ನೀವು ಸುಮ್ಮನೆ ಉಳಿದುದರಿಂದಲೇ ಅವರು ಪ್ರಬಲರಾಗಲು ಸಾಧ್ಯವಾಗಿದ್ದು. ಜವಾಬ್ದಾರಿ, ಕಾಳಜಿ ಮತ್ತು ಪರಿಶ್ರಮ ಇರದ ನಂಬಿಕೆಯಿಂದ ಯಾವತ್ತೂ ಉಪಯೋಗವಾಗಲ್ಲ ತಿಳಿದುಕೊ ಎಂದರು.
ಶಿಷ್ಯನಿಗೆ ಗುರುಗಳು ಹೇಳುತ್ತಿದ್ದ ಮಾತು ನೆನಪಾಯಿತು. ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೆ ಗಂಗೆ ಇದ್ದರೆ, ಸಿಂಧುವಿದ್ದರೆ, ಗಿರಿ ಹಿಮಾಲಯವಿದ್ದರೆ ವೇದವಿದ್ದರೆ, ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ?
ಕೊನೆ ಮಾತು: ವಾಸ್ತವ ಕತೆಯಾಗಿಯಷ್ಟೇ ಕಾಣಿಸದಿರಲಿ. ಒಳಗಣ್ಣು ತೆರೆಯಲಿ ಎನ್ನುವುದು ಆಶಯ.
– ನರೇಂದ್ರ ಎಸ್. ಗಂಗೊಳ್ಳಿ
(ಲೇಖಕರ ಪರಿಚಯ: ಲೇಖಕರು ಅಂಕಣಕಾರರು ಮತ್ತು ವಾಣಿಜ್ಯಶಾಸ್ತ್ರ ಉಪನ್ಯಾಸಕರು)