ಉಡುಪಿ ಜಿಲ್ಲೆಯ ಹೆಸರಾಂತ ಹಾಜಿ ಅಬ್ದುಲ್ಲಾ ತಾಯಿ ಮತ್ತು ಹೆರಿಗೆ ಆಸ್ಪತ್ರೆಯನ್ನು ನಿರ್ವಹಣೆ ಮಾಡಲು ಬಿ. ಆರ್. ಶೆಟ್ಟಿ ಸಂಸ್ಥೆಗೆ ವಹಿಸಿದ ಸರ್ಕಾರವು ಇಂದು ಈ ಆಸ್ಪತ್ರೆಯನ್ನು ತ್ರಿಶಂಕು ಸ್ಥಿತಿಗೆ ತಳ್ಳಿ, ಜನರು ಪರದಾಡುವಂತೆ ಮಾಡಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹೇಳಿಕೆ ನೀಡಿದೆ. ಕಳೆದ ಮೂರು ತಿಂಗಳಿಂದ ಸಂಬಳ ನೀಡಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ವರ್ಗದವರು ಕೆಲಸ ಸ್ಥಗಿತ ಮಾಡಿ ಪ್ರತಿಭಟನೆ ಮಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ರೋಗಿ ಮತ್ತು ಮಕ್ಕಳಿಗೆ ಯಾವ ರೀತಿಯಲ್ಲಿ ಚಿಕಿತ್ಸೆ ನೀಡಲು ಮತ್ತು ಅವರ ನಿಗಾ ವಹಿಸಲು ಸಾಧ್ಯ. ಮೊದಲಿಗೆ ಈ ಆಸ್ಪತ್ರೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಿಕೊಟ್ಟಿದ್ದೆ ತಪ್ಪು, ಆ ತಪ್ಪನ್ನು ಸರಿಪಡಿಸುವ ಅವಕಾಶ ಈಗ ಒದಗಿಬಂದಿದ್ದು, ಇಂತಹ ಅವಕಾಶವನ್ನು ಸರ್ಕಾರ ಜನರ ಒಳಿತಿಗಾಗಿ ಬಳಸಿಕೊಂಡು, ಈ ಆಸ್ಪತ್ರೆಯನ್ನು ಬಿ. ಆರ್. ಶೆಟ್ಟಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ತಿಳುವಳಿಕೆ ಪತ್ರವನ್ನು (MoU) ರದ್ದುಪಡಿಸಿ, ಈ ಆಸ್ಪತ್ರೆಯನ್ನು ತನ್ನ ವಶಕ್ಕೆ ಪಡೆಯಬೇಕು ಎಂದು ಕೆ.ಆರ್.ಎಸ್ ಪಕ್ಷ ಆಗ್ರಹಿಸಿದೆ.
ಸರ್ಕಾರದ ಜಮೀನಿನಲ್ಲಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ 400 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆದಾಯದಿಂದ ಹಾಜಿ ಅಬ್ದುಲ್ಲಾ ಹೆರಿಗೆ ಆಸ್ಪತ್ರೆಯನ್ನು ಉಚಿತವಾಗಿ ನಡೆಸಲಾಗುವುದು ಎಂದು ತಿಳುವಳಿಕೆ ಪತ್ರ ಮಾಡಿಕೊಳ್ಳಲಾಗಿತ್ತು. ಆದರೆ, ಅಂತಿಮ ಒಪ್ಪಂದ ಮಾಡಿಕೊಳ್ಳದೆ, ಸರ್ಕಾರ ಆಸ್ಪತ್ರೆ ಮತ್ತು ಅದರ ಜಾಗವನ್ನು ಬಿ. ಆರ್. ಶೆಟ್ಟಿ ಸಂಸ್ಥೆಗೆ ಹಸ್ತಾಂತರ ಮಾಡಿರುವುದು ಮೊದಲನೆಯ ತಪ್ಪು. ತದನಂತರ, ನಗರಸಭೆಯ ನಿಯಮಾವಳಿಗಳನ್ನು ಉಲ್ಲಂಘಿಸಿ ಕಟ್ಟಡ ಕಟ್ಟಲು ಆರಂಭಿಸಿದ್ದು ಎರಡನೆ ಪ್ರಮಾದವಾಗಿದ್ದು, ಹೀಗೆ ಪ್ರಮಾದಗಳ ಸರಣಿಯೇ ಕಾಣಬಹುದಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿನ ಆದಾಯದಿಂದ ಹಾಜಿ ಅಬ್ದುಲ್ಲಾ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಹೇಳಲಾಗಿತ್ತು, ಅಂದರೆ, ಒಂದು ಆಸ್ಪತ್ರೆಯ ರೋಗಿಗಳಿಂದ ಪಡೆದ ಹಣದಿಂದ ಇನ್ನೊಂದು ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಸರ್ಕಾರವು ಜಿಲ್ಲೆಗೆ ಕನಿಷ್ಠ ಒಂದು ಉತ್ತಮ ಸಾರ್ವಜನಿಕ ಆಸ್ಪತ್ರೆ ನಿರ್ಮಿಸಲು/ನಿರ್ವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿಯಲ್ಲಿ ಇದೆ ಎಂಬುವುದು ಬೇಸರದ ಸಂಗತಿ.
ಯಾವ ಕಾರಣಕ್ಕಾಗಿ ವರುಷಗಳಿಂದ ಅಂತಿಮ ಒಪ್ಪಂದವನ್ನು ಸರ್ಕಾರ ಇದುವರೆವಿಗೂ ಮಾಡಿಕೊಂಡಿಲ್ಲ, ಇದುವರೆವಿಗೂ ಸರ್ಕಾರದಿಂದ ಯಾವ ರೀತಿಯ ಸೌಲಭ್ಯಗಳನ್ನು ಈ ಆಸ್ಪತ್ರೆಗೆ ನೀಡಲಾಗಿದೆ, ರೋಗಿಗಳ ಮತ್ತು ಮಕ್ಕಳ ಚಿಕಿತ್ಸೆಗಾಗಿ ಸರ್ಕಾರಗಳು ಎಷ್ಟು ಹಣ ಈ ಆಸ್ಪತ್ರೆಗೆ ನೀಡಿದೆ, ಭಾರತ ಸರ್ಕಾರದ ಆಯುಶ್ಮಾನ್ ಯೋಜನೆಯಡಿಯಲ್ಲಿ ಇಲ್ಲಿ ಚಿಕಿತ್ಸೆ ಪಡೆಯುವವರಿಗೆ ತಗಲುವ ವೆಚ್ಚವನ್ನು ಭರಿಸಲಾಗುತ್ತಿದ್ದು, ಇತ್ತೀಚೆಗೆ ಆ ಹಣ ಬಿಡುಗಡೆಯಾಗಿಲ್ಲದ ಕಾರಣ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಮತ್ತು ಇತರೆ ಸಿಬ್ಬಂದಿ ವರ್ಗದವರಿಗೆ ಕಳೆದ ಮೂರು ತಿಂಗಳಿಂದ ವೇತನ ಪಾವತಿ ಮಾಡಲಾಗಿಲ್ಲ ಎಂದು ಹೇಳಲಾಗುತ್ತಿದೆ. ಅಂದರೆ, ಉಚಿತ ಚಿಕಿತ್ಸೆ ಎನ್ನುವುದು ಕೇವಲ ತೋರಿಕೆಗೆ ಮಾತ್ರವಾಗಿದ್ದು, ಅಸಲಿನಲ್ಲಿ ಸರ್ಕಾರವೇ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿದೆ ಎಂದಾಗುತ್ತದೆ. ಯಾವ ಕಾರಣಕ್ಕಾಗಿ ಇಲ್ಲಿಯವರೆವಿಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿಲ್ಲ.
ಕೆ.ಆರ್.ಎಸ್ ಪಕ್ಷದ ಉಡುಪಿ ಜಿಲ್ಲಾ ಘಟಕದ ಗೌರವಾಧ್ಯಕ್ಷರಾಗಿರುವ ಡಾ. ಪಿ. ವಿ. ಭಂಡಾರಿಯವರು ಈ ಯೋಜನೆಯನ್ನು ಆರಂಭದಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದ್ದು, ಅದನ್ನು ಉಚಿತವಾಗಿ ಒದಗಿಸುವ ಜವಾಬ್ದಾರಿ ಸರ್ಕಾರದ ಮೇಲಿದ್ದು, ಆ ವಿಚಾರದಲ್ಲಿ ಇಲ್ಲಿಯವರೆಗಿನ ಎಲ್ಲಾ ಸರ್ಕಾರಗಳೂ ಸೋತಿದ್ದು, ಪ್ರಸ್ತುತ ಸರ್ಕಾರವು ಈ ಬಗ್ಗೆ, ಕೋವಿಡ್ ಸಂಕಷ್ಟದ ಸಮಯದಲ್ಲಿನ ಬಿಕ್ಕಟ್ಟನ್ನಾದರೂ ಗಂಭೀರವಾಗಿ ಪರಿಗಣಿಸಿ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಗಮನ ನೀಡಬೇಕು.
ಸರ್ಕಾರವು ಅಜ್ಜರಕಾಡುವಿನಲ್ಲಿನ ಜಿಲ್ಲಾಸ್ಪತ್ರೆಯನ್ನು ಮರುನಿರ್ಮಾಣ ಮಾಡಲು ರೂ. 160 ಕೋಟಿಗಳ ಹೊಸ ಯೋಜನೆಯನ್ನು ರೂಪಿಸಿದೆ. ಇದರ ಬದಲಿಗೆ, ನಗರದ ಹೃದಯಭಾಗದಲ್ಲಿರುವ ಹಾಜಿ ಅಬ್ದುಲ್ಲಾ ಆಸ್ಪತ್ರೆಯ ಪಕ್ಕದಲ್ಲಿ ಬಿ. ಆರ್. ಶೆಟ್ಟಿ ಸಂಸ್ಥೆಗೆ 400 ಹಾಸಿಗೆ ಆಸ್ಪತ್ರೆ ನಿರ್ಮಿಸಲು ನೀಡಿರುವ ಜಮೀನಿನಲ್ಲಿ ನಿರ್ಮಿಸಬೇಕು. ಇದರಿಂದ ಉತ್ತಮ ಸ್ಥಿತಿಯಲ್ಲಿರುವ ಅಜ್ಜರಕಾಡು ಆಸ್ಪತ್ರೆಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಮತ್ತಾವುದಾದರೂ ಆರೋಗ್ಯ ಸಂಬಂಧಿತ ವಿಚಾರಕ್ಕೆ ಮರುಬಳಕೆ ಮಾಡಿ, ಈಗಿರುವ ಕಟ್ಟಡಗಳನ್ನು ಒಡೆಯುವುದರಿಂದ ಆಗುವ ನಷ್ಟವನ್ನು ತಡೆಯಬಹುದು. ಹಾಗೆಯೇ, ಈಗಿರುವ ಆಸ್ಪತ್ರೆಯನ್ನು ಒಡೆದು ನಿರ್ಮಾಣ ಮಡುವಾಗ, ಜಿಲ್ಲೆಯ ರೋಗಿಗಳಿಗೆ ಸ್ಥಳಾಭಾವದಿಂದ ತೊಂದರೆಯಾಗುವುದನ್ನು ತಪ್ಪಿಸಬಹುದು.
ಉಚಿತ ಆರೋಗ್ಯ ಸೇವೆ ನೀಡುತ್ತೇವೆ ಎಂದು ಹೇಳಿ ಸರ್ಕಾರಿ ಜಮೀನು ಮತ್ತು ಸವಲತ್ತು ಪಡೆದಿರುವ ಬಹುತೇಕ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು, ತಮ್ಮ ವ್ಯಯಕ್ತಿಕ ಅಭಿವೃದ್ಧಿಗೆ ಗಮನ ನೀಡಿ, ವ್ಯಾಪಾರ ಮಾಡುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಗೆ ಜಾಗದ ಕೊರತೆ ಇದೆ ಎಂದು ಕಾರಣ ಹೇಳಲಾಗುತ್ತದೆ. ಇಷ್ಟು ವರ್ಷಗಳಾದರೂ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕ್ಲಾಲೇಜು ಸ್ಥಾಪಿಸಲು ಜಿಲ್ಲೆಯ ಜನಪ್ರತಿನಿಧಿಗಳಿಗೆ ಸಾಧ್ಯವಾಗಿಲ್ಲ. ಹೊಸದಾಗಿ ರಚನೆಯಾದ ಅನೇಕ ಜಿಲ್ಲೆಗಳು ವೈದ್ಯಕೀಯ ಕಾಲೇಜುಗಳನ್ನು ಪಡೆಯುತ್ತಿದ್ದು, ಉತ್ತಮ ಆರೋಗ್ಯ ವ್ಯವಸ್ಥೆಯಿಂದ ಜಿಲ್ಲೆಯ ಜನರು ವಂಚಿತರಾಗುತ್ತಿದ್ದಾರೆ ಮತ್ತು ಸ್ಥಳೀಯ ಪ್ರತಿಭಾವಂತ ವಿದ್ಯಾರ್ಥಿಗಳು ಹಣ ವ್ಯಯ ಮಾಡಿ ದೂರದೂರುಗಳಲ್ಲಿ ವ್ಯಾಸಂಗ ಮಾಡುವಂತಾಗಿದೆ.
ಸರ್ಕಾರವು ಈ ಕೂಡಲೇ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ತನ್ನ ವಶಕ್ಕೆ ಪಡೆಯಬೇಕು, ಬಿ. ಆರ್. ಶೆಟ್ಟಿ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ತಿಳುವಳಿಕೆ ಪತ್ರವನ್ನು ರದ್ದುಪಡಿಸಿ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕು. ಇನ್ನು ಮುಂದೆ ಸರ್ಕಾರ ತನ್ನ ಯಾವುದೇ ಆಸ್ಪತ್ರೆಯನ್ನು ನಿರ್ವಹಣೆಯ ಹೆಸರಿನಲ್ಲಿ ಖಾಸಗಿಯವರಿಗೆ ವಹಿಸಬಾರದು, ಖಾಸಗಿಯವರಿಗೆ ಆಸ್ಪತ್ರೆ ತೆರೆಯಲು ಸರ್ಕಾರದ ಜಮೀನುಗಳನ್ನು ಉಚಿತವಾಗಿ ಅಥವಾ ಕಡಿಮೆ ದರದಲ್ಲಿ ನೀಡಬಾರದು ಮತ್ತು ಉಡುಪಿಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಆರಂಭಿಸಬೇಕು ಎಂದು ಕೆ.ಆರ್.ಎಸ್ ಪಕ್ಷ ಪ್ರಕಟಣೆಯ ಮೂಲಕ ಆಗ್ರಹಿಸಿದೆ.