ಈ ಬಾರಿಯ ಇಂಜಿನಿಯರಿಂಗ್ ಕೋರ್ಸುಗಳ ಸೇರ್ಪಡೆಗೆ ಬೋರ್ಡ್ ಪರೀಕ್ಷೆ ಅಂಕವನ್ನು ಪರಿಗಣಿಸದೇ ಕೇವಲ ಸಿ.ಇ.ಟಿ. ಅಂಕಗಳ ಆರ್ಹತೆಯ ಮೇಲೆ ಇಂಜಿನಿಯರಿಂಗ್ ಸೀಟ್ ಹಂಚಬೇಕೆನ್ನುವ ನಿರ್ಣಯ ಬಹುಮುಖ್ಯವಾಗಿ ಗ್ರಾಮೀಣ ಅದರಲ್ಲೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಬಹುದೊಡ್ಡ ಅಘಾತಕಾರಿ ಸುದ್ದಿಯಾಗಿದೆ. ಈ ನಿರ್ಣಯ ಖಂಡಿತವಾಗಿಯೂ ಈ ವರ್ಗದ ವಿದ್ಯಾರ್ಥಿಗಳಿಗೆ ತೀರ ಅನ್ಯಾಯವಾಗುವ ಸಾಧ್ಯತೆ ನಿಚ್ಚಳವಾಗಿದೆ.
ಇದಕ್ಕೆ ಕಾರಣಗಳು ಹಲವು:
1. ಹಿಂದಿನ ಹಲವು ವರ್ಷಗಳ ಸಿ.ಇ.ಟಿ. ಫಲಿತಾಂಶದ ಆಧಾರದ ಅನುಭವದ ಮೇಲೆ ಹೇಳುವುದಿದ್ದರೆ ಬೋರ್ಡ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ಗ್ರಾಮೀಣ ಕಾಲೇಜಿನ ವಿದ್ಯಾರ್ಥಿಗಳು ಸಿ.ಇ.ಟಿ.ಪರೀಕ್ಷೆಯಲ್ಲಿ ಹಿಂದೆ ಬಿದ್ದಿರುವ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೂ ಹಲವು ಕಾರಣವೂ ಇದೆ.
2. ಬೋರ್ಡ್ ಪರೀಕ್ಷಾ ತಯಾರಿ ವಿಧಾನವೇ ಬೇರೆ ಸಿ.ಇ.ಟಿ. ಪರೀಕ್ಷಾ ತಯಾರಿ ವಿಧಾನವೇ ಬೇರೆ. ಸಿ.ಇ.ಟಿ. ಪರೀಕ್ಷೆಗೆ ತಯಾರು ಮಾಡುವ ಟ್ಯೂಷನ್ ಫ್ಯಾಕ್ಟರಿಗಳು ತೀರ ಗ್ರಾಮೀಣ ಪ್ರದೇಶದಲ್ಲಿ ಇಲ್ಲವೇ ಇಲ್ಲ. ಈ ವ್ಯವಸ್ಥೆ ಇರುವುದು ಕೂಡ ನಗರ ಪ್ರದೇಶಗಳಲ್ಲಿ. ಇಲ್ಲಿ ಟ್ಯೂಷನ್ ಪಡೆದುಕೊಳ್ಳುವುದು ಬಡ ವಿದ್ಯಾರ್ಥಿಗಳ ಪಾಲಿಗೆ ಅಸಾಧ್ಯವಾದ ದುಬಾರಿಯ ಮಾತು.
3. ಶಾಲಾ ಕಾಲೇಜುಗಳಲ್ಲಿ ಇಂತಹ ಟ್ಯೂಷನ್ ಕೊಡಬಾರದು ಅನ್ನುವ ನಿಯಮವೇ ಸರ್ಕಾರ ವಿಧಿಸಿರುವಾಗ ಇನ್ನೇನು ಬಂತು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿ.ಇ.ಟಿ.ಯ ಕನಸು.
4. ನಮ್ಮ ಶಿಕ್ಷಣದ ಮೀಸಲಾತಿ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದರೆ ನಗರ ಪ್ರದೇಶದ ಶ್ರೀಮಂತರ ಮಕ್ಕಳು ಗ್ರಾಮೀಣ ಪ್ರದೇಶದಲ್ಲಿರುವ ಉನ್ನತ ಗುಣಮಟ್ಟದ ಶಾಲಾ ಕಾಲೇಜುಗಳಲ್ಲಿ ಕಲಿತು ಗ್ರಾಮೀಣ ಮೀಸಲಾತಿ ಲಾಭ ಪಡೆದುಕೊಳ್ಳುವ ಅವಕಾಶ ಮಾಡಿಕೊಟ್ಟ ಶೈಕ್ಷಣಿಕ ಮೀಸಲಾತಿ ವ್ಯವಸ್ಥೆ !!. ಅದೇ ನಗರ ಪ್ರದೇಶಗಳಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೆ ಈ ಮೀಸಲಾತಿ ಇಲ್ಲ. ಇದು ನಮ್ಮ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪ್ರವೇಶಾತಿಯ ನಿಯಮ.
5. ಅಂತೂ ಈ ಬಾರಿಯ ಕೊರೊನಾ ಅನುಕಂಪದ ’ಪರೀಕ್ಷೆ ಇಲ್ಲದೆ ತೇರ್ಗಡೆ ವ್ಯವಸ್ಥೆ’ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುವುದಂತೂ ಸತ್ಯ.
ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.