ಜಿಲ್ಲೆಯಲ್ಲಿ ಜೂನ್ 14 ರ ಬೆಳಗ್ಗೆ 6 ಗಂಟೆಯಿಂದ ಕೋವಿಡ್ ನಿಯಂತ್ರಣಕ್ಕೆ ವಿಧಿಸಲಾಗಿದ್ದ ಕೆಲವು ನಿರ್ಬಂಧಗಳನ್ನು ತೆರವುಗೊಳಿಸಲಿದ್ದು, ಈ ಸಂದರ್ಭದಲ್ಲಿ ಸರ್ಕಾರ ಸೂಚಿಸಿರುವ ಚಟುವಟಿಕೆಗಳನ್ನು ಹೊರತುಪಡಿಸಿ, ಇತರೆ ಚಟುವಟಿಕೆಗಳನ್ನು ಕೈಗೊಂಡರೆ ಅಂತಹವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಜಿಲ್ಲೆಯಲ್ಲಿ ಅನ್‌ಲಾಕ್ ಸಮಯದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳ ಸಮರ್ಪಕ ಅನುಷ್ಠಾನ ಮಾಡುವ ಕುರಿತಂತೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆ ಕಡಿಮೆಯಿರುವ ಕಾರಣ ರಾಜ್ಯ ಸರ್ಕಾರ ಪ್ರಸ್ತುತ ವಿಧಿಸಲಾಗಿದ್ದ ನಿರ್ಬಂದಗಳಲ್ಲಿ ಸಡಿಲಿಕೆ ನೀಡಿ, ಜಿಲ್ಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಆರಂಭಿಸಲು ಮಾರ್ಗಸೂಚಿ ಹೊರಡಿಸಿದ್ದು, ಅದರಂತೆ ಜೂನ್ 14 ರಿಂದ 21 ರ ವರೆಗೆ ಜಿಲ್ಲೆಯಲ್ಲಿ ಈ ಮುಂದಿನಂತೆ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾದಿಕಾರಿ ಹೇಳಿದರು.
- ಸೋಮವಾರ ದಿಂದ ಶುಕ್ರವಾರದ ವರೆಗೆ ಪ್ರತಿದಿನ ಬೆಳಗ್ಗೆ 6 ರಿಂದ 2 ಗಂಟೆಯವರೆಗೆ, ಎಲ್ಲಾ ಉತ್ಪಾದನಾ ಚಟುವಟಿಕೆ ನಿರ್ವಹಿಸುವ ಕೈಗಾರಿಕೆಗಳು, ಸಂಸ್ಥೆಗಳು ಶೇ.50 ರಷ್ಟು ಕಾರ್ಮಿಕರೊಂದಿಗೆ ಕಾರ್ಯನಿರ್ವಹಿಸಬಹುದು.
- ಗಾರ್ಮೆಂಟ್ ಗಳಲ್ಲಿ ಮಾತ್ರ ಶೇ.30 ಸಿಬ್ಬಂದಿ ಕಾರ್ಯನಿರ್ವಹಿಸಬಹುದು.
- ಕಟ್ಟಡ ನಿರ್ಮಾಣ ಮತ್ತು ರಿಪೇರಿ ಚಟುವಟಿಕೆಗಳಿಗೆ ಅಗತ್ಯವಿರುವ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್ , ಕಬ್ಬಿಣ ಸೇರಿದಂತೆ ಅಗತ್ಯವಿರುವ ವಸ್ತುಗಳ ಮಾರಾಟ ಮಳಿಗೆಗಳು ತೆರೆಯಲು ಅವಕಾಶವಿದೆ.
- ಆಹಾರ ಪದಾರ್ಥಗಳು, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮೀನು ಮತ್ತು ಮಾಂಸ ಡೈರಿ ಮತ್ತು ಹಾಲಿನ ಬೂತ್ ಗಳು ತೆರೆಯಲು ಮತ್ತು ಪಶು ಆಹಾರ ಮಾರಾಟಕ್ಕೆ ಅನುಮತಿ ನೀಡಲಾಗಿದೆ.
- ಬೀದಿ ಬದಿ ವ್ಯಾಪಾರಿಗಳು ಹಾಗೂ ಪಡಿತರ ಅಂಗಡಿಗಳು ಸಹ ಈ ಸಮಯದಲ್ಲಿ ಕಾರ್ಯನಿರ್ವಹಿಸಬಹುದು ಆದರೆ ಬೀದಿ ಬದಿ ವ್ಯಾಪಾರಿಗಳು ಯಾವುದೇ ಆಹಾರ ಪದಾರ್ಥಗಳನ್ನು ಮಾರುವಂತಿಲ್ಲ.
- ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಪಾರ್ಸೆಲ್ ಗೆ ಅವಕಾಶವಿದೆ.
- ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಪಾರ್ಸೆಲ್ ಗೆ ಮಾತ್ರ ಅನುಮತಿ ನೀಡಲಾಗಿದೆ.
- ಪಾರ್ಕ್ಗಳು ಬೆಳಗಿನ ವಾಕಿಂಗ್ ಮಾಡಲು ಮಾತ್ರ ಬೆ.5 ರಿಂದ 10 ರ ವರೆಗೆ ತೆರೆಯಲು ಅವಕಾಶ ನೀಡಿದ್ದು, ಪಾರ್ಕ್ ನಲ್ಲಿ ಇತರೇ ಕ್ರೀಡೆಗಳು ಸೇರಿದಂತೆ ಇತರೇ ಯಾವುದೇ ಚಟುವಟಿಕೆಗೆ ಅನುಮತಿಯಿಲ್ಲ.
- ಹೋಂ ಡೆಲಿವರಿ ಸೇವೆ ಒದಗಿಸುವವರಿಗೆ ಈ ಹಿಂದಿನಂತೆ ಯಾವುದೇ ನಿರ್ಭಂಧಗಳಿಲ್ಲ ಎಂದರು. ಇದನ್ನು ಹೊರತುಪಡಿಸಿ ಇತರೇ ಯವುದೇ ಅಂಗಡಿಗಳನ್ನು ತೆರೆಯಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟವಾಗಿ ತಿಳಿಸಿದರು.
- ಟ್ಯಾಕ್ಸಿ ಮತ್ತು ಆಟೋದಲ್ಲಿ ಗರಿಷ್ಠ 2 ಪ್ರಯಾಣಿಕರು ಮಾತ್ರ ಸಂಚರಿಸಲು ಅನುಮತಿಯಿದೆ. ಕನ್ನಡಕದ ಅಂಗಡಿಗಳು ಬೆ.6 ರಿಂದ 10 ರ ವರೆಗೆ ತೆರೆಯಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಎಲ್ಲಾ ಉತ್ಪಾದನಾ ಚಟುವಟಿಕೆ ನಿರ್ವಹಿಸುವ ಕೈಗಾರಿಕೆಗಳು, ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಪಾಲಿಸಿ ಕಾರ್ಯನಿರ್ವಹಿಸಬೇಕು, ತಮ್ಮಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ವಿವರಗಳನ್ನು ಒದಗಿಸಬೇಕು, ನಿಗದಿತ ಸಂಖ್ಯೆಗಿಂತ ಹೆಚ್ಚು ಕಾರ್ಮಿಕರನ್ನು ಬಳಸಿಕೊಂಡಲ್ಲಿ ಅಂತಹವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು. ಕಾರ್ಯನಿರ್ವಹಿಸಲು ಅನುಮತಿ ನೀಡಿರುವ ಎಲ್ಲಾ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಪಾಲನೆಗೆ ಸೂಕ್ತ ಮಾರ್ಕಿಂಗ್ ವ್ಯವಸ್ಥೆ ಮಾಡಿರಬೇಕು ಇಲ್ಲವಾದಲ್ಲಿ ಅಂತಹ ಅಂಗಡಿಗಳ ಲೈಸೆನ್ಸ್ ಅಮಾನತು ಮಾಡಲಾಗುವುದು , ಕೋವಿಡ್ ನಿಯಂತ್ರಣಕ್ಕೆ ನಿಯೋಜಿಸಿರುವ ಎಲ್ಲಾ ಫೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ತಹಸೀಲ್ದಾರ್ ಗಳು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಡಿಸಿ ಜಿ.ಜಗದೀಶ್ ಸೂಚಿಸಿದರು.
ಉಡುಪಿಯಲ್ಲಿ ಪ್ರತಿದಿನ ನೈಟ್ ಕರ್ಫ್ಯೂ ಹೇಗಿರಲಿದೆ?
ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿದಿನ ರಾತ್ರಿ ನೈಟ್ ಕರ್ಫ್ಯೂ ಇರಲಿದ್ದು, ರಾತ್ರಿ 7 ಗಂಟೆಯಿಂದ ಮರುದಿನ ಬೆಳಗ್ಗೆ 5 ರ ವರೆಗೆ ಓಡಾಟವನ್ನು ನಿರ್ಭಂದಿಸಿದೆ. ಆದರೆ ಚಕಿತ್ಸೆಗಾಗಿ ಆಸ್ಪತ್ರೆಗೆ ತೆರಳುವವರು, ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಸಂಸ್ಥೆಗಳ ನೌಕರರು ಸೂಖ್ತ ಗುರುತಿನ ಚೀಟಿಯೊಂದಿಗೆ, ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸುವ ನೌಕರರು, ವೈದ್ಯಕೀಯ ಸಿಬ್ಬಂದಿಗಳ ಸಂಚಾರಕ್ಕೆ ನಿರ್ಬಂಧಗಳಿಲ್ಲ, ಸರಕು ಸಾಗಾಣಿಕೆ ವಾಹನಗಳು, ಇ ಕಾಮರ್ಸ್ ಮತ್ತು ಹೋಂ ಡೆಲಿವರಿ ಸೇವೆ ನೀಡುವ ವಾಹನಗಳು ಹಾಗೂ ರೈಲು ಮತ್ತು ವಿಮಾನ ಪ್ರಯಾಣಕ್ಕೆ ತೆರಳುವವರು ಪ್ರಯಾಣದ ಟಿಕೆಟ್ ನೊಂದಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಇದನ್ನು ಉಲ್ಲಂಘಿಸಿ ಸಂಚರಿಸುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾದಿಕಾರಿ ಸೂಚನೆ ನೀಡಿದರು.
ಉಡುಪಿಯಲ್ಲಿ ವೀಕೆಂಡ್ ಕರ್ಫ್ಯೂ ಹೇಗಿರಲಿದೆ?
ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದ್ದು, ಈ ಅವಧಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಬಂದಪಟ್ಟ ಇಲಾಖೆಗಳು, ತುರ್ತು ಮತ್ತು ಅಗತ್ಯ ಸೇವೆ , ಟೆಲಿಕಾಂ ಮತ್ತು ಇಂಟರ್ನೆಟ್ ಸೇವೆ ಒದಗಿಸುವ ಇಲಾಖೆಗಳು ಮತ್ತು ಕೈಗಾರಿಕೆ ಕಾರ್ಯನಿರ್ವಹಿಸಲು ಅನುಮತಿಯಿದ್ದು, ಈ ಕಚೇರಿಗಳ ಮತ್ತು ಸಂಸ್ಥೆಗಳ ನೌಕರರು ಸೂಕ್ತ ಗುರುತಿನ ಚೀಟಿಯೊಂದಿಗೆ ಸಂಚರಿಸಬಹುದು. ಆಹಾರ ಪದಾರ್ಥಗಳು, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮೀನು ಮತ್ತು ಮಾಂಸ ಡೈರಿ ಮತ್ತು ಹಾಲಿನ ಬೂತ್ ಗಳು ತೆರೆಯಲು ಮತ್ತು ಪಶು ಆಹಾರ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಬೀದಿ ಬದಿ ವ್ಯಾಪಾರಿಗಳು ಹಾಗೂ ಪಡಿತರ ಅಂಗಡಿಗಳು ಸಹ ಈ ಸಮಯದಲ್ಲಿ ಕಾರ್ಯನಿರ್ವಹಿಸಬಹುದು ಆದರೆ ಬೀದಿ ಬದಿ ವ್ಯಾಪಾರಿಗಳು ಯಾವುದೇ ಆಹಾರ ಪದಾರ್ಥಗಳನ್ನು ಮಾರುವಂತಿಲ್ಲ. ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ಮದ್ಯ ಪಾರ್ಸೆಲ್ ಗೆ ಅವಕಾಶವಿದೆ. ಹೋಂ ಡೆಲಿವರಿ ಸೇವೆ ಒದಗಿಸುವವರಿಗೆ ಈ ಹಿಂದಿನಂತೆ ಯಾವುದೇ ನಿರ್ಭಂಧಗಳಿಲ್ಲ, ರೈಲು ಮತ್ತು ವಿಮಾನ ಪ್ರಯಾಣಕ್ಕೆ ತೆರಳುವವರು ಪ್ರಯಾಣದ ಟಿಕೆಟ್ ನೊಂದಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ ಎಂದರು.
ಮದುವೆ: ಸೂಕ್ತ ಅನುಮತಿಯೊಂದಿಗೆ ಗರಿಷ್ಠ 40 ಮಂದಿ ಮೀರದಂತೆ ಮದುವೆಗಳನ್ನು ಮನೆಗಳಲ್ಲಿ ನಡೆಸಲು ಅನುಮತಿಯಿದ್ದು, ಶವಸಂಸ್ಕಾರ ದಲ್ಲಿ ಗರಿಷ್ಠ 5 ಮಂದಿ ಮಾತ್ರ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾದಿಕಾರಿ ಜಿ.ಜಗದೀಶ್ ಹೇಳಿದರು.
ಅನ್‌ಲಾಕ್ ಅವಧಿಯಲ್ಲಿ ಯಾವುದೇ ನಿಯಮಗಳ ಉಲ್ಲಂಘನೆಯಾಗದಂತೆ ಎಲ್ಲಾ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಅನುಮತಿ ನೀಡಲಾದ ಚಟುವಟಿಕೆ ಹೊರತುಪಡಿಸಿ ಇತರೆ ಚಟುವಟಿಕೆ ನಡೆಸುವವರ ವಿರುದ್ದ ಹಾಗೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ.ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಎಎಸ್ಪಿ ಕುಮಾರಚಂದ್ರ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.