ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಉಡುಪಿ ವಲಯ ಸಮಿತಿಯ ವತಿಯಿಂದ ಲಾಕ್ ಡೌನ್ ನಿಂದಾಗಿ ಸಮಸ್ಯೆಯಲ್ಲಿರುವ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ ಜರುಗಿತು. ಉಡುಪಿ ವಲಯ ಪ್ರಧಾನ ಧರ್ಮಗುರುಗಳಾದ ವಂ. ಚಾರ್ಲ್ಸ್ ಮಿನೇಜಸ್ ಅವರು ಸಂಬಂಧಿತ ಘಟಕದ ಅಧ್ಯಕ್ಷರುಗಳಿಗೆ ಸಾಂಕೇತಿಕವಾಗಿ ಕಿಟ್ ವಿತರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೋರೊನಾ ಪ್ರತಿಯೊಬ್ಬರಿಗೆ ಇಂದು ಸಮಸ್ಯೆಯಾಗಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಹಲವಾರು ಕುಟುಂಬಗಳಿಗೆ ಕೆಲಸವಿಲ್ಲದೆ ಪರದಾಡುವ ಪರಿಸ್ಥಿತಿ ಒದಗಿಬಂದಿದೆ. ಅಂತಹ ಕುಟುಂಬಗಳನ್ನು ಗುರುತಿಸಿ ಸಹಾಯ ಮಾಡುತ್ತಿರುವ ಕೆಥೊಲಿಕ್ ಸಭಾ ಉಡುಪಿ ವಲಯದ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಕೆಥೊಲಿಕ್ ಸಭಾ ಉಡುಪಿ ವಲಯ ಸಮಿತಿಯ ವತಿಯಿಂದ ಸುಮಾರು ರೂ 50 ಸಾವಿರಕ್ಕೂ ಅಧಿಕ ಮೌಲ್ಯದ ರೇಷನ್ ಕಿಟ್ ಗಳನ್ನು ವಲಯ ವ್ಯಾಪ್ತಿಯ ಘಟಕಗಳ ಮೂಲಕ ಅಗತ್ಯವಿರುವ ಕುಟುಂಬಗಳಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ಕೆಥೊಲಿಕ್ ಸಭಾ ಉಡುಪಿ ವಲಯಾಧ್ಯಕ್ಷೆ ಲವೀನಾ ಪಿರೇರಾ, ಕಾರ್ಯದರ್ಶಿ ಆಲ್ವಿನ್ ಅಂದ್ರಾದೆ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.