ಉಡುಪಿ ಕ್ಷೇತ್ರದಾದ್ಯಂತ ಹಡಿಲು ಬಿಟ್ಟಿರುವ ಕೃಷಿ ಭೂಮಿಗಳನ್ನು ಕೃಷಿ ಮಾಡುವ ಸಂಕಲ್ಪದೊಂದಿಗೆ ಆರಂಭಿಸಿರುವ “ಹಡಿಲು ಭೂಮಿ ಕೃಷಿ ಆಂದೋಲನ” ಇಂದು ಬೃಹತ್ ಆಂದೋಲನವಾಗಿ ಮಾರ್ಪಾಡಾಗಿದೆ. ನಗರದ ವಾರ್ಡ್ ವಾರ್ಡ್ ಗಳಲ್ಲಿ, ಗ್ರಾಮ ಗ್ರಾಮಗಳಲ್ಲಿ ಜನಪ್ರತಿನಿಧಿಗಳು, ಯುವಕರು, ಕೃಷಿಕರು ಸಂಪೂರ್ಣವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದು ಈ ಆಂದೋಲನದ ಫಲಶ್ರುತಿ ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು. ಹಡಿಲು ಭೂಮಿ ಕೃಷಿ ಆಂದೋಲನದಡಿ ಬುಧವಾರ ಅಂಬಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 20 ಎಕರೆ ಹಡಿಲು ಕೃಷಿ ಭೂಮಿಯ ನಾಟಿ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿಯನ್ನು ಹಡಿಲು ಕೃಷಿ ಭೂಮಿ ಮುಕ್ತವನ್ನಾಗಿಸುವುದು ನಮ್ಮ ಈ ಕಾರ್ಯಕ್ರಮದ ಉದ್ದೇಶ. ಇಲ್ಲಿ ಲಾಭ ನಷ್ಟದ ಲೆಕ್ಕಾಚಾರ ವಿರುವುದಿಲ್ಲ. ಯಾವುದೇ ಕ್ರಿಮಿನಾಶಕ ಬಳಸದೆ ವಿಷಮುಕ್ತ ಸಾವಯವ ಕೃಷಿ ಮಾಡಲಾಗುವುದು. ಬಂದ ಇಳುವರಿಗೆ ದೇಶದಾದ್ಯಂತ ಹೊಸ ಮಾದರಿಯ ವ್ಯಾಪಾರ ನೀತಿಯನ್ನು ಸೃಷ್ಟಿಸಿ ಮಾರಾಟ ಮಾಡುವ ಉದ್ದೇಶವಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲಾ ರೈತರಿಗೂ ಅನುಕೂಲವಾಗಬೇಕು ಎಂದು ಹೇಳಿದ ಅವರು ಮುಂದಿನ ಬಾರಿಯಿಂದ ರೈತರೇ ಅವರ ಕೃಷಿ ಭೂಮಿಗಳನ್ನು ಕೃಷಿ ಮಾಡಲು ಬೇಕಾದ ಸಹಕಾರಗಳನ್ನು ಟ್ರಸ್ಟ್ ಮುಖಾಂತರ ನೀಡಲಾಗುವುದು ಎಂದರು.
ಅಂಬಲಪಾಡಿ ಜನಾರ್ಧನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿಗಳಾದ ಡಾ. ನಿ. ಬೀ. ವಿಜಯ್ ಬಲ್ಲಾಳ್ ಹಾಗೂ ಶಾಸಕರು ಹಾಲನ್ನು ಅರ್ಪಿಸುವ ಮೂಲಕ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ಅಂಬಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರೋಹಿಣಿ, ಉಪಾಧ್ಯಕ್ಷರಾದ ಸೋಮನಾಥ್, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ಜಿಲ್ಲಾ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರಾದ ದಿನಕರ್ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ನಗರಸಭಾ ಸದಸ್ಯರಾದ ಹರೀಶ್ ಶೆಟ್ಟಿ, ಅಂಬಲಪಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಂದ್ರ ಪಂದುಬೆಟ್ಟು, ಜಿಲ್ಲಾ ಬಿಜೆಪಿ ಸಹ ವಕ್ತಾರರಾದ ಶಿವಕುಮಾರ್, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿಗಳಾದ ಮುರಳಿ ಕಡೆಕಾರ್, ಕೋಶಾಧಿಕಾರಿಗಳಾದ ರಾಘವೇಂದ್ರ ಕಿಣಿ ಮತ್ತು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಅಂಬಲಪಾಡಿ ಗ್ರಾಮ ಪಂಚಾಯತ್ ಸದಸ್ಯರು, ಅಂಬಲಪಾಡಿ ಗ್ರಾಮೋತ್ಥಾನ ಸಮಿತಿ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.