ಚಿಕ್ಕಬಳ್ಳಾಪುರ: ಟೆಕ್ಕಿಯೊಬ್ಬರು ಮರ ಹತ್ತಿ ಸೆಲ್ಫೀ ವಿಡಿಯೋ ಮಾಡುವಾಗ ಮೇಲಿನಿಂದ ಬಿದ್ದು ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಎಂಬಲ್ಲಿ ನಡೆದಿದೆ.
ಹಿನ್ನೀರಿನ ಸೊಬಗನ್ನು ಕಣ್ತುಂಬಿಕೊಳ್ಳಲು ಸ್ನೇಹಿತರ ಜೊತೆಗೆ ಇಲ್ಲಿಗೆ ಬಂದಿದ್ದ ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ ಬೆಂಗಳೂರು ನಗರ ನಿವಾಸಿ ಸಾಫ್ಟ್ವೇರ್ ಇಂಜಿನಿಯರ್ ರೋಹಿತ್ (24) ಮೃತಪಟ್ಟ ಯುವಕ.
ಮೃತ ಯುವಕನ ಸ್ನೇಹಿತರು ಈಜು ಬರದಿದ್ದರೂ ನೀರಿಗೆ ಇಳಿದಿದ್ದರು. ಮರ ಹತ್ತಿ ಸೆಲ್ಫೀ ವಿಡಿಯೋ ಮಾಡುತ್ತಿದ್ದ ರೋಹಿತ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಯುವಕ ಕುಡಿದ ಅಮಲಿನಲ್ಲಿದ್ದ ಎನ್ನಲಾಗಿದೆ.
ಒಟ್ಟು 5 ಮಂದಿ ಹುಟ್ಟುಹಬ್ಬದ ಆಚರಣೆಯ ಪಾರ್ಟಿ ಮಾಡಲು ಸ್ಥಳಕ್ಕೆ ಬಂದಿದ್ದರು. ಸೆಲ್ಫೀ ಹುಚ್ಚು ಈತನಿಗೆ ಮುಳುವಾಯಿತು. ಸ್ಥಳಕ್ಕೆ ಧಾವಿಸಿದ ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಅಗ್ನಿಶಾಮಕ ಸಿಬ್ಬಂದಿಗಳು ರೋಹಿತ್ ಶವವನ್ನು ಮೇಲೆತ್ತಲು ನೆರವಾದರು. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ನಡೆದಿದೆ.