ನವದೆಹಲಿ, ಸೆ. 20: ಸಂಸತ್ತಿನ ವಿಶೇಷ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸಂಸತ್ತಿನ ಮೇಲಿನ ಭಯೋತ್ಪಾದಕ ದಾಳಿಯನ್ನು ನೆನಪಿಸಿಕೊಂಡು, ಇದು ಪ್ರಜಾಪ್ರಭುತ್ವದ ಸಾರದ ಮೇಲಿನ ದಾಳಿಯಾಗಿದೆ. ಸಂಸತ್ ನ್ನು ಧೈರ್ಯದಿಂದ ರಕ್ಷಿಸಿದವರ ತ್ಯಾಗ ಬಲಿದಾನ ಪ್ರೇರಣೆ ನೀಡುತ್ತಿದೆ ಎಂದರು. ಸಂಸತ್ತಿನ ಮೇಲೆ ಭಯೋತ್ಪಾದಕ ದಾಳಿ ಕಟ್ಟಡದ ಮೇಲಿನ ದಾಳಿಯಲ್ಲ. ಒಂದು ರೀತಿಯಲ್ಲಿ, ಇದು ಪ್ರಜಾಪ್ರಭುತ್ವದ ತಾಯಿಯ ಮೇಲೆ, ನಮ್ಮ ಜೀವಂತ ಆತ್ಮದ ಮೇಲಿನ ದಾಳಿಯಾಗಿತ್ತು. ಆ ಘಟನೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಸಂಸತ್ತು ಮತ್ತು ಅದರ ಎಲ್ಲಾ ಸದಸ್ಯರನ್ನು ರಕ್ಷಿಸಲು ಪ್ರಾಣವನ್ನು ಸಮರ್ಪಣೆ ಮಾಡಿದವರ ಕಾರ್ಯ ಸ್ಮರಿಸಬೇಕಿದೆ ಎಂದರು.
ಸಂಸತ್ತಿನಲ್ಲಿ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ನಾನು ಸಂಸದನಾಗಿ ಮೊದಲ ಬಾರಿಗೆ ಈ ಕಟ್ಟಡವನ್ನು (ಸಂಸತ್ತು) ಪ್ರವೇಶಿಸಿದಾಗ, ನಾನು ನಮಸ್ಕರಿಸಿ ಪ್ರಜಾಪ್ರಭುತ್ವದ ದೇವಾಲಯವನ್ನು ಗೌರವಿಸಿದೆ. ಇದು ನನಗೆ ಭಾವನಾತ್ಮಕ ಕ್ಷಣವಾಗಿತ್ತು. ರೈಲ್ವೆ ಪ್ಲಾಟ್ ಫಾರ್ಮ್ ನಲ್ಲಿ ವಾಸಿಸುವ ಬಡ ಕುಟುಂಬಕ್ಕೆ ಸೇರಿದ ಮಗು ಎಂದಾದರೂ ಸಂಸತ್ತಿಗೆ ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ನಾನು ಜನರಿಂದ ಇಷ್ಟು ಪ್ರೀತಿಯನ್ನು ಪಡೆಯುತ್ತೇನೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದರು.