ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ವೀರಭದ್ರ ಸಿಂಗ್ (87) ದೀರ್ಘಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. ಬಹು ಅಂಗಾಂಗ ವೈಫಲ್ಯದಿಂದಾಗಿ ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಅವರು ನಿಧನರಾದರು. ಎರಡು ದಿನಗಳ ಹಿಂದೆ ಅವರು ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ವೀರಭದ್ರ ಸಿಂಗ್ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. 9 ಬಾರಿ ಶಾಸಕರು ಮತ್ತು ಐದು ಬಾರಿ ಸಂಸದರಾಗಿದ್ದ ಸಿಂಗ್ ಆರು ಅವಧಿಗೆ ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು.
ಏಪ್ರಿಲ್ 12 ರಂದು ಕೋವಿಡ್ ಪಾಸಿಟಿವ್ ಆಗಿದ್ದ ಅವರನ್ನು ಮೊಹಾಲಿಯ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಅವರ ಆರೋಗ್ಯ ಮತ್ತೆ ಹದಗೆಟ್ಟಿತು.
ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ವೀರಭದ್ರ ಸಿಂಗ್ ನಿಧನದ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಆರು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಮುಖ್ಯಮಂತ್ರಿ ಮತ್ತು ಸಂಸದರಾಗಿ ತಮ್ಮ ಕರ್ತವ್ಯನಿಷ್ಠೆಯಿಂದ ಜನರಿಗೆ ಪ್ರೇರಣೆ ನೀಡಿದ್ದರು. ಆಡಳಿತ ಮತ್ತು ಶಾಸಕಾಂಗ ಅನುಭವದಿಂದ ವೀರಭದ್ರ ಸಿಂಗ್ ಮೇರು ವ್ಯಕ್ತಿತ್ವದ ರಾಜಕಾರಣಿಯಾಗಿದ್ದರು ಎಂದು ರಾಷ್ಟ್ರಪತಿ, ಪ್ರಧಾನಿ ಶೋಕ ವ್ಯಕ್ತಪಡಿಸಿದ್ದಾರೆ.