(ಉಡುಪಿ ಬುಲೆಟಿನ್ ವಿಶೇಷ ವರದಿ) ನಿನ್ನೆ ನಡೆದ ಭಾರತ-ಬಾಂಗ್ಲಾದೇಶ ಟಿ20 ವಿಶ್ವಕಪ್ ಪಂದ್ಯ ಹಲವು ರೋಚಕ ಕ್ಷಣಗಳಿಗೆ ವೇದಿಕೆಯಾಯಿತು. ಟೀಂ ಇಂಡಿಯಾ ರೋಚಕ ಗೆಲುವನ್ನು ಸಾಧಿಸಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಕೈಯಲ್ಲಿ ಬ್ರಶ್ ಹಿಡಿದ ಓರ್ವರು ಅಭಿಮಾನಿಗಳ ಮನ ಗೆದ್ದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯಾಟದ ಸಂದರ್ಭದಲ್ಲಿ ದಿಢೀರನೆ ಮಳೆ ಬಂದ ಕಾರಣ, ಮೈದಾನದಲ್ಲಿ ಫೀಲ್ಡಿಂಗ್ ವೇಳೆ ಟೀಂ ಇಂಡಿಯಾ ಆಟಗಾರರಿಗೆ ಸಮಸ್ಯೆಯಾಗಬಾರದೆಂದು ಓರ್ವರು ಕೈಯಲ್ಲಿ ಬ್ರಶ್ ಹಿಡಿದುಕೊಂಡು ಮೈದಾನದಲ್ಲಿ ಅತ್ತಿತ್ತ ಓಡುತ್ತಿದ್ದ ದೃಶ್ಯ ಬಹುಶಃ ನೇರಪ್ರಸಾರ ನೋಡುವವರು ಗಮನಿಸಿದ್ದರು.
ಟೀಂ ಇಂಡಿಯಾ ಆಟಗಾರರ ಶೂ ಕ್ಲೀನ್ ಮಾಡಲು ರಾಘು, ಕೈಯಲ್ಲಿ ಬ್ರಶ್ ನೊಂದಿಗೆ ಆಗಾಗ್ಗೆ ಕಾಣಿಸಿಕೊಂಡಿದ್ದರು. ಮೈದಾನದಲ್ಲಿ ರೋಹಿತ್ ಪಡೆ ಸಲೀಸಾಗಿ ಫೀಲ್ಡಿಂಗ್ ಮಾಡಲು ನೆರವಾದ ಟೀಂ ಇಂಡಿಯಾದ ಸಪೋರ್ಟ್ ಸ್ಟಾಫ್ ರಾಘವೇಂದ್ರ ಅವರ ಪಾತ್ರ ಪ್ರಮುಖವಾಗಿತ್ತು. ಟೀಂ ಇಂಡಿಯಾ ಬ್ಯಾಟ್ಸ್ ಮೆನ್ ಗಳಿಗೆ ನೆಟ್ ಪ್ರಾಕ್ಟೀಸ್ ಸಂದರ್ಭದಲ್ಲಿ ‘ಥ್ರೋಡೌನ್’ ತರಬೇತಿ ನೀಡುವಲ್ಲಿ ರಾಘವೇಂದ್ರ ಅವರದ್ದು ಎತ್ತಿದ ಕೈ. ‘ಥ್ರೋಡೌನ್’ ಸ್ಪೆಷಲಿಸ್ಟ್ ಆಗಿರುವ ಇವರು ಉತ್ತರ ಕನ್ನಡ ಜಿಲ್ಲೆಯ ಕುಮಟಾದವರು.
2011 ರಿಂದ ಟೀಂ ಇಂಡಿಯಾಗೆ ತರಬೇತಿಯ ಸಂದರ್ಭದಲ್ಲಿ ಸಹಕಾರ ನೀಡುತ್ತಿರುವ ರಾಘವೇಂದ್ರರವರ ಸೇವೆಯನ್ನು ಸಚಿನ್ ತೆಂಡೂಲ್ಕರ್, ಧೋನಿ, ವಿರಾಟ್ ಕೊಹ್ಲಿ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಬ್ಯಾಟ್ಸ್ ಮೆನ್ ಗಳಿಗೆ ವೇಗವಾಗಿ ಚೆಂಡನ್ನು ಎಸೆಯಲು ನೆರವಾಗುವ ರೋಬೋ ಆರ್ಮ್ ವಿನ್ಯಾಸ ಮಾಡುವಲ್ಲಿಯೂ ರಾಘವೇಂದ್ರರ ಮಹತ್ತರ ಕೊಡುಗೆ ಇದೆ. ಮೂರು ಗಂಟೆಯ ತರಬೇತಿಯಲ್ಲಿ ರಾಘು ಅವರು ನಿರಂತರವಾಗಿ 140ಕಿಮೀ ವೇಗದಲ್ಲಿ ಒಂದು ಸಾವಿರ ಎಸೆತಗಳನ್ನು ಹಾಕುವ ಸಾಮರ್ಥ್ಯ ಹೊಂದಿದ್ದಾರೆ.
ಒಟ್ಟಾರೆಯಾಗಿ ಟೀಂ ಇಂಡಿಯಾ ಯಶಸ್ಸಿನಲ್ಲಿ ರಾಘವೇಂದ್ರ ಅವರ ಪಾತ್ರ ಎಲೆಮರೆಯ ಕಾಯಿಯಂತಿದೆ ಎಂದರೆ ತಪ್ಪಾಗಲಾರದು.