ನವದೆಹಲಿ: 21 ನೇ ವಾರ್ಷಿಕ ಭಾರತ-ರಷ್ಯಾ ಶೃಂಗಸಭೆ ನಡೆಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇಂದು ಭಾರತಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಪುತಿನ್ ನಡುವಿನ ವಾರ್ಷಿಕ ಮಾತುಕತೆಗಳ ನಂತರ ಭಾರತ ಮತ್ತು ರಷ್ಯಾ 10 ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಈ ಒಪ್ಪಂದಗಳು ಬಾಹ್ಯಾಕಾಶ, ಸಂಸ್ಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ ಇತ್ಯಾದಿ ಕ್ಷೇತ್ರಗಳಿಗೆ ಸಂಬಂಧಿಸಿವೆ.
ವಿದೇಶ ಮತ್ತು ರಕ್ಷಣಾ ಸಚಿವರ ಮಟ್ಟದಲ್ಲಿ ನಡೆಯಲಿರುವ ಮೊದಲ 2+2 ಸಚಿವರ ಸಂವಾದ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ. ಭಾರತ ಮತ್ತು ರಷ್ಯಾ ತನ್ನ ಮೊದಲ 2+2 ಸ್ವರೂಪದ ಸಂವಾದದಲ್ಲಿ ಇಂದು ಪ್ರಮುಖ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ತಾಲಿಬಾನ್ ಸ್ವಾಧೀನದ ನಂತರ ಅಫ್ಘಾನಿಸ್ತಾನದ ಪರಿಸ್ಥಿತಿ, ಭಯೋತ್ಪಾದಕ ಗುಂಪುಗಳಿಂದ ಹೊರಹೊಮ್ಮುವ ಬೆದರಿಕೆಗಳು, ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರು, ಮಹಿಳೆಯರು ಮತ್ತು ಮಕ್ಕಳ ಮಾನವ ಹಕ್ಕುಗಳ ರಕ್ಷಣೆ ಇತ್ಯಾದಿ ವಿಚಾರಗಳ ಬಗ್ಗೆ ವಿಸ್ತ್ರತ ಚರ್ಚೆ ನಡೆಯುವ ಸಾಧ್ಯತೆಗಳಿವೆ.