ಚಂಡೀಘಡ: ದಿಢೀರ್ ಬೆಳವಣಿಗೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಕ್ಯಾ. ಅಮರೀಂದರ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದಾರೆ. ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲ ಬನವಾರಿಲಾಲ್ ಪುರೋಹಿತ್ ರವರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಕ್ಯಾ. ಅಮರೀಂದರ್ ಸಿಂಗ್, ಪಕ್ಷದ ಹೈಕಮಾಂಡ್ ತಳೆದಿರುವ ನಿರ್ಧಾರಗಳಿಂದ ನನಗೆ ಬೇಸರವಾಗಿದೆ. ನನ್ನ ಮೇಲೆ ಪಕ್ಷಕ್ಕೆ ಭರವಸೆ, ವಿಶ್ವಾಸ ಇಲ್ಲದಿರುವುದು ಬೇಸರದ ಸಂಗತಿ. ಅವರಿಗೆ ಯಾರ ಮೇಲೆ ವಿಶ್ವಾಸವಿದೆ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ಮಾಡಲಿ ಎಂದು ಕಾಂಗ್ರೆಸ್ ಹೈಕಮಾಂಡಿಗೆ ನೇರ ಸವಾಲನ್ನು ಕ್ಯಾ. ಅಮರೀಂದರ್ ಸಿಂಗ್ ಹಾಕಿದ್ದಾರೆ.
ಏತನ್ಮಧ್ಯೆ ಪಕ್ಷ ಬಿಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕ್ಯಾ. ಅಮರೀಂದರ್ ಸಿಂಗ್, ನಾನು ಕಾಂಗ್ರೆಸ್ ನಲ್ಲೇ ಇದ್ದೇನೆ, ನನ್ನ ಬೆಂಬಲಿಗರ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಿದ್ದುಗೆ ಮನ್ನಣೆ ಕ್ಯಾಪ್ಟನ್ ಅಸಮಾಧಾನಕ್ಕೆ ಕಾರಣ: ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ಧು ಅವರನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿರುವುದು ಕ್ಯಾ. ಅಮರೀಂದರ್ ಸಿಂಗ್ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ಹೈಕಮಾಂಡ್ ನವಜೋತ್ ಸಿಂಗ್ ಸಿದ್ಧುರನ್ನು ಆಯ್ಕೆ ಮಾಡಲು ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಕ್ಯಾ. ಅಮರೀಂದರ್ ಸಿಂಗ್ ರಾಜೀನಾಮೆಗೆ ಇದೂ ಒಂದು ಕಾರಣವಾಗಿದೆ.