ಚಂಡೀಗಢ: ಭದ್ರತಾ ಲೋಪದಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ಲೈ ಓವರ್‌ನಲ್ಲಿ ಸುಮಾರು 20 ನಿಮಿಷಗಳ ಕಾಲ ಸಿಲುಕಿದ ಘಟನೆ ಪಂಜಾಬ್ ನಲ್ಲಿ ಇಂದು ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾರ್ಯಕ್ರಮವನ್ನು ರದ್ದುಗೊಳಿಸಿ ನೇರವಾಗಿ ಬಟಿಂಡಾ ವಿಮಾನ ನಿಲ್ದಾಣಕ್ಕೆ ವಾಪಸಾದರು.
ಭಟಿಂಡಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದ ಪ್ರಧಾನಿ ಮೋದಿ ಅಲ್ಲಿನ ಅಧಿಕಾರಿಗಳಿಗೆ, “ಅಪ್ನೆ ಸಿಎಂ ಕೋ ಥ್ಯಾಂಕ್ಸ್ ಕೆಹನಾ, ಕಿ ಮೇ ಭಟಿಂಡಾ ಏರ್ ಪೋರ್ಟ್ ತಕ್ ಜಿಂದಾ ಲೌಟ್ ಪಾಯಾ (ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ಹೇಳಿ. ಏಕೆಂದರೆ ನಾನು ಭಟಿಂಡಾ ವಿಮಾನ ನಿಲ್ದಾಣದವರೆಗೆ ಜೀವಂತವಾಗಿ ಮರಳಿದ್ದೇನೆ) ಎಂದು ಹೇಳಿದರು ಎಂದು ಭಟಿಂಡಾ ವಿಮಾನ ನಿಲ್ದಾಣದ ಅಧಿಕಾರಿಗಳು ರಾಷ್ಟ್ರೀಯ ಸುದ್ಧಿ ಸಂಸ್ಥೆಗೆ ತಿಳಿಸಿದ್ದಾರೆ.
ಕಾರಣ ಕೇಳಿದ ಗೃಹ ಸಚಿವಾಲಯ: ಪಂಜಾಬ್ ಸರ್ಕಾರದ ಭದ್ರತಾ ಲೋಪವೇ ಇದಕ್ಕೆ ಕಾರಣ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಘಟನೆಯ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಂಡಾಮಂಡಲವಾಗಿದ್ದು ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ತಿಳಿಸಿದ್ದಾರೆ.
ಘಟನೆಯ ವಿವರ: ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡಲು ಬಟಿಂಡಾಗೆ ಪ್ರಧಾನಿ ಬಂದಿಳಿದು ಹೆಲಿಕಾಪ್ಟರ್ ಮೂಲಕ ಸ್ಥಳಕ್ಕೆ ತೆರಳಲು ಸಜ್ಜಾಗಿದ್ದರು.
ಆದರೆ ಮಳೆಯ ಕಾರಣ ಸ್ಥಳದಲ್ಲೇ ಸುಮಾರು 20 ನಿಮಿಷಗಳ ಕಾಲ ಅವರು ಕಾಯಲು ನಿರ್ಧರಿಸಿದರು. ಮಳೆ ನಿಲ್ಲದ ಕಾರಣ ರಸ್ತೆಯ ಮೂಲಕ ಅವರು ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಭೇಟಿಗೆ ಸಂಚಾರ ಆರಂಭಿಸಿದರು.
ಪಂಜಾಬ್ ಪೊಲೀಸರಿಂದ ಅಗತ್ಯ ಭದ್ರತೆಯೊಂದಿಗೆ ರಸ್ತೆಯಲ್ಲಿ ಪ್ರಯಾಣ ಬೆಳೆಸಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವ್ಯವಸ್ಥೆ ಕಲ್ಪಿಸಲಾಯಿತು. ಮಾರ್ಗ ಮಧ್ಯದಲ್ಲಿ ಪ್ರತಿಭಟನೆಯಿಂದಾಗಿ ರಸ್ತೆ ಬ್ಲಾಕ್ ಆಗಿತ್ತು.
ಫ್ಲೈ ಓವರ್ ನಲ್ಲಿ ಭಾರಿ ಭದ್ರತಾ ಲೋಪವಾದ ಕಾರಣ ಪ್ರಧಾನಿ ಸುಮಾರು 20 ನಿಮಿಷಗಳ ಕಾಲ ಸ್ಥಳದಲ್ಲಿ ಸಿಲುಕಿದರು.
ಪ್ರಧಾನಿ ಮಾರ್ಗದಲ್ಲಿ ಪ್ರತಿಭಟನಾಕಾರರು ರಸ್ತೆಯನ್ನು ಬ್ಲಾಕ್ ಮಾಡಿದ ಕಾರಣದಿಂದಾಗಿ ಫ್ಲೈ ಓವರ್‌ನಲ್ಲಿ ಪ್ರಧಾನಿ ಬೆಂಗಾವಲು ವಾಹನಗಳಿಗೆ ಸಂಚರಿಸಲು ಸಾಧ್ಯವಾಗಲಿಲ್ಲ. ಇದರಿಂದ ಸುಮಾರು 20 ನಿಮಿಷಗಳ ಕಾಲ ಪ್ರಧಾನಿ ಮೋದಿ ಅವರು ಫ್ಲೈ ಓವರ್‌ನಲ್ಲೇ ಸಿಲುಕುವಂತಾಯಿತು.
ಪ್ರಧಾನಿ ಅವರ ಕಾರ್ಯಕ್ರಮದ ಸಂಪೂರ್ಣ ವೇಳಾಪಟ್ಟಿಯನ್ನು ಪಂಜಾಬ್ ಸರ್ಕಾರಕ್ಕೆ ಮುಂಚಿತವಾಗಿ ತಿಳಿಸಲಾಗಿದ್ದರೂ ಅಗತ್ಯ ಭದ್ರತೆ ಒದಗಿಸುವುದು ಅವರ ಕರ್ತವ್ಯವಾಗಿತ್ತು.
ಆದರೆ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗದ ಕಾರಣ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಾಗದೇ ವಿಮಾನ ನಿಲ್ದಾಣಕ್ಕೆ ಹಿಂತಿರುಗಬೇಕಾಯಿತು ಎಂದು ಪಿಎಂಓ ಹೇಳಿದೆ.
ಘಟನೆಯ ಬಗ್ಗೆ ಆಕೋಶ ವ್ಯಕ್ತಪಡಿಸಿದ ಪಂಜಾಬ್ ಮಾಜಿ ಸಿಎಂ: ಪಂಜಾಬ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವ ರೀತಿ ಕುಸಿದಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ.
ಪಂಜಾಬ್ ಮುಖ್ಯಮಂತ್ರಿ, ಗೃಹ ಮಂತ್ರಿಗೆ ಪಾಕಿಸ್ತಾನದ ಗಡಿಯಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಪ್ರದೇಶದಲ್ಲಿ ದೇಶದ ಪ್ರಧಾನಿಗೆ ಸುಗಮ ಸಂಚಾರವನ್ನು ಒದಗಿಸಲು ಸಾಧ್ಯವಾಗದಿದ್ದಾಗ, ಕಚೇರಿಯಲ್ಲಿ ಉಳಿಯುವ ಯಾವುದೇ ಹಕ್ಕಿಲ್ಲ. ತಕ್ಷಣ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಪಂಜಾಬ್ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಪಂಜಾಬ್‍ಗೆ ಪ್ರಧಾನಿ ಮೋದಿಗೆ ಭೇಟಿ ನೀಡಿದ ವೇಳೆ ಭದ್ರತಾ ಲೋಪವೆಸಗಿದ ಪಂಜಾಬ್ ಸರ್ಕಾರದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಂಟಾಗಿರುವ ಭದ್ರತಾ ಲೋಪವನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ನಡೆಯಬಾರದು. ಇದೇ ಸಂದರ್ಭದಲ್ಲಿ ಇದು ಒಂದು ಸಹಜ ಘಟನೆ ಎಂದು ಪಂಜಾಬ್ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚೆನ್ನಿ ಅವರು ನೀಡಿರುವ ಬೇಜವಾಬ್ದಾರಿ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ
ಇಂಧನ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿ ಹೇರಿ ಜನರ ಸ್ವಾತ್ಯಂತ್ರ ಕಸಿದುಕೊಂಡಿದ್ದ ಕಾಂಗ್ರೆಸ್, ಇಂದು ಪಂಜಾಬ್ ನಲ್ಲಿ ಪ್ರಧಾನ ಮಂತ್ರಿಗಳ ಭದ್ರತೆಯನ್ನೇ ಬುಡಮೇಲು ಮಾಡಲು ಪ್ರಯತ್ನಿಸಿದ ಘಟನೆಯನ್ನ ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ. ಇಂತಹ ಬೆದರಿಕೆಗಳಿಗೆ ಎಂದಿಗೂ ಜಗ್ಗುವುದಿಲ್ಲ. ಕಾಂಗ್ರೆಸ್ ಇದಕ್ಕೆ ತಕ್ಕ ಬೆಲೆಯನ್ನ ಶೀಘ್ರದಲ್ಲೆ ತೆರಲಿದೆ ಎಂದು ಟ್ವೀಟ್ ಮಾಡಿದ್ದಾರೆ.