ವಾರಣಾಸಿ, ಮೇ 14: ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಸಾರ್ವತ್ರಿಕ ಚುನಾವಣೆಯ ಏಳನೇ ಮತ್ತು ಅಂತಿಮ ಹಂತದಲ್ಲಿ ವಾರಣಾಸಿಯಲ್ಲಿ ಮತದಾನ ನಡೆಯಲಿದ್ದು, ಈ ಹಂತದ ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದೆ. ಪ್ರಧಾನಿಯವರು ಮೊದಲು ಗಂಗೆಯಲ್ಲಿ ಸ್ನಾನ ಮಾಡಿ, ಗಂಗಾ ಆರತಿ ನಡೆಸಿ ನಂತರ ಕಾಶಿಯ ಕಾಲಭೈರವನ ಆಶೀರ್ವಾದ ಪಡೆದ ನಂತರ ನಾಮನಿರ್ದೇಶನ ಪ್ರಕ್ರಿಯೆಗೆ ಮುಂದಾದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎನ್.ಡಿ.ಎ ಮೈತ್ರಿಕೂಟದ ನಾಯಕರಾದ ಚಂದ್ರಬಾಬು ನಾಯ್ಡು, ಏಕನಾಥ್ ಶಿಂಧೆ, ಜಿತನ್ ರಾಮ್ ಮಾಂಝಿ, ಸಂಜಯ್ ನಿಶಾದ್, ರಾಮದಾಸ್ ಅಠವಳೆ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಜನಾಥ್ ಸಿಂಗ್, ಹರ್ದೀಪ್ ಸಿಂಗ್ ಪುರಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.
ಪ್ರತಿಪಕ್ಷ ಇಂಡಿ ಮೈತ್ರಿಕೂಟದ ಜಂಟಿ ಅಭ್ಯರ್ಥಿಯಾಗಿರುವ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅವರು ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಅವರು ವಾರಣಾಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದರು. ಆದರೆ ಅವರು ಎರಡೂ ಬಾರಿ ಮೂರನೇ ಸ್ಥಾನ ಗಳಿಸಿದ್ದರು. 2019 ರ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ಅವರನ್ನು 4.79 ಲಕ್ಷ ಮತಗಳಿಂದ ಸೋಲಿಸಿದ್ದರು.