ದ್ವಾರಕಾ, ಫೆ.25: (ಉಡುಪಿ ಬುಲೆಟಿನ್ ವರದಿ) ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮುಳುಗಿರುವ ಶ್ರೀ ಕೃಷ್ಣನ ನಗರಿ ದ್ವಾರಕೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಸ್ಕೂಬಾ ಡೈವಿಂಗ್ ಧಿರಿಸಿನೊಂದಿಗೆ ಸಮುದ್ರದಲ್ಲಿ ಮುಳುಗಿದ ಪ್ರಧಾನಿ ನರೇಂದ್ರ ಮೋದಿ, ಮುಳುಗಡೆಯಾಗಿರುವ ದ್ವಾರಕಾ ನಗರಿಯ ಅವಶೇಷಗಳ ಮೇಲೆ ನವಿಲು ಗರಿಗಳನ್ನು ಇರಿಸಿ ಧ್ಯಾನಮುದ್ರೆಯಲ್ಲಿ ಕೆಲಹೊತ್ತು ಧ್ಯಾನ ಮಾಡಿದರು. ಈ ವಿಡಿಯೋಗಳನ್ನು ತಮ್ಮ ಎಕ್ಸ್ ನಲ್ಲಿ ಪ್ರಧಾನಿ ಪ್ರಕಟಿಸಿದ್ದಾರೆ.
ನನಗೆ ಇದೊಂದು ವಿಶೇಷ ಆಧ್ಯಾತ್ಮಿಕ ಅನುಭೂತಿ. ಅಲ್ಲಿ ನನಗೆ ಭಗವಾನ್ ಶ್ರೀ ಕೃಷ್ಣನ ಇರುವಿಕೆಯ ಅನುಭವವಾಯಿತು ಎಂದು ಪ್ರಧಾನಿ ತಮ್ಮ ಅನುಭವವನ್ನು ಬಣ್ಣಿಸಿದ್ದಾರೆ. ಇಲ್ಲಿಗೆ ಹೋಗಬೇಕಿತ್ತು ಎಂಬ ಹಲವಾರು ದಶಗಳಿಂದ ನನ್ನಲ್ಲಿದ್ದ ಆಸೆ ಇಂದು ಈಡೇರಿದೆ. ನನಗೆ ಮಾತುಗಳೇ ಬರುವುದಿಲ್ಲ. ಇದೊಂದು ಭಾವನಾತ್ಮಕ ಕ್ಷಣ ಎಂದು ಪ್ರಧಾನಿ ಮೋದಿ ದ್ವಾರಕೆಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಹೇಳಿದರು. ಇದಕ್ಕೂ ಮೊದಲು ಅವರು ಗುಜರಾತಿನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ದೇಶದ ಅತ್ಯಂತ ಉದ್ದ ಸಮುದ್ರ ಸೇತುವಾದ (2.3 ಕಿಮೀ) ಕೇಬಲ್ ಸೇತುವೆಯಾದ ‘ಸುದರ್ಶನ್ ಸೇತು’ ಲೋಕಾರ್ಪಣೆ ನಡೆಸಿದರು. ಈ ಸೇತುವೆ ದ್ವಾರಕಾ ದ್ವೀಪವನ್ನು ಓಖಾದೊಂದಿಗೆ ಸಂಪರ್ಕ ಕಲ್ಪಿಸುತ್ತದೆ.
ದ್ವಾರಕೆಯ ಬಗ್ಗೆ: ದ್ವಾಪರ ಯುಗದ ನಂತರ (ಭಗವಾನ್ ಶ್ರೀಕೃಷ್ಣ ಭೂಮಿ ಬಿಟ್ಟು ಹೋದ ಮೇಲೆ) ದ್ವಾರಕಾ ನಗರಿಯು ಸಮುದ್ರ ಸೇರಿತು ಎಂದು ಇತಿಹಾಸಲ್ಲಿ ಉಲ್ಲೇಖವಿದೆ. ಇದಲ್ಲದೇ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪುರಾತತ್ವ ತಜ್ಞರೂ ಕೂಡ ದ್ವಾರಕೆಯ ಪ್ರದೇಶದಲ್ಲಿ ಶ್ರೀ ಕೃಷ್ಣ ರಾಜ್ಯಭಾರ ನಡೆಸಿದ ದ್ವಾರಕಾ ನಗರಿ ಮುಳುಗಿರುವ ಸ್ಥಳವನ್ನು ಸಮುದ್ರದಲ್ಲಿ (ಗುಜರಾತ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ) ಕಂಡು ಹಿಡಿದಿದ್ದಾರೆ. ಇದರ ಚಿತ್ರಗಳು ಕೂಡ ಅಂತರ್ಜಾಲದಲ್ಲಿ ಲಭ್ಯವಿದೆ.