ನವದೆಹಲಿ: ರೈಲ್ವೆ ಮೂಲಸೌಕರ್ಯದ ಆಧುನೀಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದಾಖಲೆಯ ಹೂಡಿಕೆ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪಶ್ಚಿಮ ಬಂಗಾಳದ ಹೌರಾ-ನ್ಯೂ ಜಲ್ಪೈಗುರಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಶುಕ್ರವಾರ ವರ್ಚುವಲ್ ಮಾಧ್ಯಮದ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
21 ನೇ ಶತಮಾನದಲ್ಲಿ ಭಾರತದ ಕ್ಷಿಪ್ರ ಅಭಿವೃದ್ಧಿಗೆ ಭಾರತೀಯ ರೈಲ್ವೆಯ ತ್ವರಿತ ಅಭಿವೃದ್ಧಿ, ತ್ವರಿತ ಸುಧಾರಣೆ ಇವೆಲ್ಲವೂ ಬಹುಮುಖ್ಯವಾಗಿದೆ. ಅದಕ್ಕಾಗಿಯೇ ಇಂದು ಕೇಂದ್ರ ಸರ್ಕಾರವು ಭಾರತೀಯ ರೈಲ್ವೆಯನ್ನು ಆಧುನೀಕರಿಸಲು, ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ದಾಖಲೆಯ ಹೂಡಿಕೆಗಳನ್ನು ಮಾಡುತ್ತಿದೆ. ಭಾರತೀಯ ರೈಲ್ವೆಯ ಪುನಶ್ಚೇತನಕ್ಕಾಗಿ ರಾಷ್ಟ್ರವ್ಯಾಪಿ ಅಭಿಯಾನವು ನಡೆಯುತ್ತಿದೆ.
ಇಂದು ದೇಶದಲ್ಲಿ ವಂದೇ ಭಾರತ್, ತೇಜಸ್, ಹಮ್ಸಫರ್ ನಂತಹ ಆಧುನಿಕ ರೈಲುಗಳು ನಿರ್ಮಾಣವಾಗುತ್ತಿವೆ. ವಿಸ್ಟಾ-ಡೋಮ್ ಕೋಚ್ ಗಳು ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುತ್ತಿವೆ. ಸುರಕ್ಷಿತ, ಆಧುನಿಕ ಕೋಚ್ ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ರೈಲು ನಿಲ್ದಾಣವೂ ವಿಮಾಅನ ನಿಲ್ದಾಣದಂತೆ ಅಭಿವೃದ್ಧಿಯಾಗುತ್ತಿದೆ. ಇಂದು ರೈಲ್ವೆ ಮಾರ್ಗಗಳ ದ್ವಿಗುಣಗೊಳಿಸುವಿಕೆ, ರೈಲು ಮಾರ್ಗಗಳ ವಿದ್ಯುದೀಕರಣ ಹಿಂದೆಂದೂ ನಡೆಯದ ವೇಗದಲ್ಲಿ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರೈಲ್ವೆ ಸಚಿವ ಅಶ್ವಿನಿ ವೈಷ್ನವ್, ಕೇಂದ್ರ ಸಚಿವರುಗಳಾದ ಸುಭಾಷ್ ಸರ್ಕಾರ್, ನಿಸಿತ್ ಪ್ರಮಾಣಿಕ್, ಜಾನ್ ಬಾರ್ಲಾ, ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಸಂಸದ ಪ್ರಸೂನ್ ಮುಂತಾದವರು ಉಪಸ್ಥಿತರಿದ್ದರು.