ನವದೆಹಲಿ, ಫೆ. 6: ಬಿಜೆಪಿಯೇತರ ರಾಜ್ಯಗಳಿಗೆ ಕೇಂದ್ರವು ಹಣವನ್ನು ತಡೆಹಿಡಿಯುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇದು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ರಾಜಕೀಯವಾಗಿ ಕೆರಳಿಸುವ ನಿರೂಪಣೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಪಾಲಿನ ಹಣವನ್ನು ಕೇಂದ್ರ ಬಿಡುಗಡೆ ಮಾಡುತ್ತಿಲ್ಲ ಎಂಬ ಕಾಂಗ್ರೆಸ್ ಪಕ್ಷದ ಹೇಳಿಕೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಳ್ಳಿ ಹಾಕಿದ್ದಾರೆ. ಲೋಕಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಲೋಕಸಭೆಯ ವಿರೋಧ ಪಕ್ಷದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಕರ್ನಾಟಕದ ಪಾಲಿನ ಹಣದ ಬಿಡುಗಡೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ನಿರ್ಮಲಾ ಸೀತಾರಾಮನ್ ಉತ್ತರ ನೀಡಿದರು. ಇದು ರಾಜಕೀಯ ಪ್ರೇರಿತ ಜನರ ದಿಕ್ಕು ತಪ್ಪಿಸುವ ವಾದ. ಕರ್ನಾಟಕ ಕಾಂಗ್ರೆಸ್ ಸರ್ಕಾರದ ಬಜೆಟ್ ಗೆ ಅನುಗುಣವಾಗದೇ ಭಾರಿ ಪ್ರಮಾಣದಲ್ಲಿ ಖರ್ಚು ಮಾಡುತ್ತಿದ್ದರೆ, ನನ್ನನ್ನು ದೂಷಿಸಬೇಡಿ. ವಿಕೇಂದ್ರೀಕರಣ ಯೋಜನೆಯ ಪ್ರಕಾರ ರಾಜ್ಯಗಳಿಗೆ ಹಣಕಾಸು ಆಯೋಗವು ಮೀಸಲಿಟ್ಟ ಹಣವನ್ನು ಯಾರೂ ನಿರಾಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಜಿಎಸ್‌ಟಿ, ನಿರ್ದಿಷ್ಟವಾಗಿ ರಾಜ್ಯ ಜಿಎಸ್‌ಟಿ, ರಾಜ್ಯಗಳಿಗೆ ಶೇ. 100 ರಷ್ಟು ಹೋಗುತ್ತದೆ. ರಾಜ್ಯಗಳು ಸಂಗ್ರಹಿಸುವ ಎಸ್‌ಜಿಎಸ್‌ಟಿಯ ಶೇ. 100 ರಷ್ಟು ಅವರೊಂದಿಗೆ ಇರುತ್ತದೆ ಎಂದರು.