1. ರಾಜಸ್ಥಾನದ ಶ್ರೀಗಂಗಾನಗರ್ ನಲ್ಲಿರುವ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ನ್ನು ಬಿ.ಎಸ್.ಎಫ್ ಹೊಡೆದುರುಳಿಸಿ 6 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿದೆ. ರಾಜಸ್ಥಾನ ಪೊಲೀಸ್ ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯು ಶುಕ್ರವಾರ ಮಧ್ಯರಾತ್ರಿ ಮತ್ತು ಶನಿವಾರ ನಸುಕಿನ ವೇಳೆ ನಡೆಯಿತು.
2. ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಸಹ ಉಸ್ತುವಾರಿಗಳಾಗಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹಾಗೂ ಕೇಂದ್ರ ಸಚಿವ ಮನ್ಸುಖ್ ಮಂಡಾವಿಯಾರನ್ನು ಬಿಜೆಪಿ ನೇಮಿಸಿದೆ.
3. ಜಗತ್ತಿನ ಅತ್ಯಂತ ಪ್ರಖ್ಯಾತ ನಾಯಕರಾಗಿ ಪ್ರಧಾನಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಅಮೆರಿಕಾದ ಮಾರ್ನಿಂಗ್ ಕನ್ಸಲ್ಟ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೇ. 78 ಮಂದಿ ಮೋದಿ ಪರವಾಗಿ ಒಲವು ವ್ಯಕ್ತಪಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರಾನ್, ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಸೇರಿದಂತೆ 22 ಜಾಗತಿಕ ನಾಯಕರನ್ನು ಈ ಸಮೀಕ್ಷೆ ಒಳಗೊಂಡಿತು.
4. ರಂಗಭೂಮಿ (ರಿ.) ಉಡುಪಿ ಇದರ ರಂಗಭೂಮಿ ರಂಗೋತ್ಸವ ಅಂಗವಾಗಿ ಆರೋಗ್ಯ, ಶಿಕ್ಷಣ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳ ಸಾಮುದಾಯಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿರುವ ನಾಡೋಜ ಡಾ. ಜಿ. ಶಂಕರ್ ಅವರಿಗೆ “ಕರುನಾಡ ಕರುಣಾಳು” ಬಿರುದಿನೊಂದಿಗೆ ರಂಗಭೂಮಿ ಪ್ರಶಸ್ತಿ ಪ್ರಧಾನ ಸಮಾರಂಭ ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಶನಿವಾರ ನಡೆಯಿತು.
5. ತೀರ್ಥಹಳ್ಳಿ- ಕುಂದಾಪುರ ರಾಜ್ಯ ಹೆದ್ದಾರಿ 52ರ ಬಾಳೆಬರೆ ಘಾಟ್ ನಲ್ಲಿ ಕಾಂಕ್ರೀಟ್ ಪೇವ್ ಮೆಂಟ್ ಕಾಮಗಾರಿ ನಿರ್ಮಾಣಕ್ಕೆ ಸಂಬಂಧಿಸಿದಂತೆ 05-02-2023ರಿಂದ 05-04-2023ರವರೆಗೆ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಮತ್ತು ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಆದೇಶ ಹೊರಡಿಸಿದ್ದಾರೆ.
6. ಉಡುಪಿ ನಗರಸಭಾ ಸದಸ್ಯ ಕೆ. ವಿಜಯ್ ಕೊಡವೂರು ನೇತೃತ್ವದಲ್ಲಿ 173ನೇ ಶ್ರಮದಾನ ಕಾರ್ಯಕ್ರಮ ಫೆಬ್ರವರಿ 5 ರಂದು ಬೆಳಿಗ್ಗೆ 8 ಗಂಟೆಗೆ ಕೊಡವೂರು ಗೋಶಾಲೆ ಮಾರ್ಗದ ಬಳಿ ನಡೆಯಲಿದೆ.