ತಿರುವನಂತಪುರ, ನ.6: ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥರ ಚತುರ್ಥ ಪರ್ಯಾಯ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಪರ್ಯಾಯ ತೀರ್ಥ ಕ್ಷೇತ್ರ ಯಾತ್ರೆಯು ಕೇರಳದ ತಿರುವನಂತಪುರ ಪ್ರವೇಶಿಸಿದೆ. ಇಲ್ಲಿನ ಮಾಧ್ವ ತುಳು ಬ್ರಾಹ್ಮಣ ಸಮಾಜವು ಶ್ರೀ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಗೌರವಪೂರ್ವಕವಾಗಿ ಸ್ವಾಗತಿಸಿ ಅಭಿನಂದಿಸಿದರು. ಆಂಜನೇಯ ದೇವಸ್ಥಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಶ್ರೀಗಳವರು ತಿರುವನಂತಪುರದ ಎಲ್ಲ ಭಕ್ತರನ್ನು ಪರ್ಯಾಯಕ್ಕೆ ಆಹ್ವಾನಿಸಿ, ಗುರುಗಳ ಪರ್ಯಾಯದ ವಿಶೇಷ ಯೋಜನೆಗಳ ಬಗ್ಗೆ ತಿಳಿಸಿ ಸಹಕಾರ ಕೋರಿದರು. ಈ ಸಂಧರ್ಭದಲ್ಲಿ, ಇಲ್ಲಿನ ಪ್ರಸಿದ್ಧ ಉದ್ಯಮಿ ಭೀಮ ಜ್ಯುವೆಲ್ಲರ್ಸ್ ನ ಮಾಲಕರಾದ ಗೋವಿಂದ ರಾಯರು ಕೋಟಿ ಗೀತಾ ಲೇಖನದ ಯೋಜನೆಯ ಮಲಯಾಳಿ ಭಾಷೆಯ ಗೀತಾ ಪುಸ್ತಕವನ್ನು ಬಿಡುಗಡೆಗೊಳಿಸಿ, ಕೇರಳದ ಈ ಪ್ರಾಂತದಲ್ಲಿ ಶ್ರೀಗಳವರ ಎಲ್ಲ ಯೋಜನೆಗಳಲ್ಲಿ ತಮ್ಮ ಇಡೀ ಸಮಾಜ ಕೈ ಜೋಡಿಸಿ ಪರ್ಯಾಯದಲ್ಲಿ ಸಹಕಾರ ಕೊಡಲಿದ್ದೇವೆ ಎಂದು ತಿಳಿಸಿದರು.
ಸಮಾಜದ ಅಧ್ಯಕ್ಷರಾದ ಉಪೇಂದ್ರ ಪೋತಿ, ಉಪಾಧ್ಯಕ್ಷರಾದ ನಾಗರಾಜರಾಯರು, ದೇವಳದ ಆಡಳಿತಾಧಿಕಾರಿ ರವೀಂದ್ರನ್, ಮಹಾನಗರಪಾಲಿಕೆ ಸದಸ್ಯೆ ಜಾನಕಿ, ಕಾರ್ಯದರ್ಶಿ ಸೀತಾರಾಮ, ರಾಮರಾಜ್, ಕೇರಳ ಹಿಂದೂ ಪರಿಷತ್ ನ ಗೋಪಾಲ್ ಜಿ ಮಹಿಳಾ ಘಟಕದ ಅಧ್ಯಕ್ಷೆ ಶಾಂತಾ ರಾಜಲಕ್ಷ್ಮಿಮೋಹನ್, ಯುವ ಘಟಕ ಅಧ್ಯಕ್ಷೆ ಮಾಲವಿಕಾ, ಕೇರಳ ತುಳು ಬ್ರಾಹ್ಮಣ ಸಮಾಜದ ಅಧ್ಯಕ್ಷ ಸುರೇಶ್ ಮತ್ತು ಇನ್ನಿತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೂರಜ್ ಸ್ವಾಗತಿಸಿ, ಸೂರ್ಯನಾರಾಯಣ ಕುಂಜೂರಾಯ ವಂದಿಸಿದರು. ಯಾತ್ರಾ ವ್ಯವಸ್ಥಾಪಕರಾದ ರಮೇಶ್ ಭಟ್ ಕೆ ಕಾರ್ಯಕ್ರಮ ಸಂಯೋಜಿಸಿದ್ದರು. ಮುಂದೆ ಶ್ರೀಗಳವರಿಗೆ ಶ್ರೀ ಅನಂತಪದ್ಮನಾಭ ದೇವರ ದರ್ಶನ ಮಾಡಿಸಿದ ದೇವಳದ ಪ್ರಧಾನ ಅರ್ಚಕರಾದ ರಾಜೇಂದ್ರ ಅರಣಿತ್ತಾಯ ಪರ್ಯಾಯವು ಯಶಸ್ವಿಯಾಗಿ ನಡೆಯಲಿ, ಶ್ರೀ ಅನಂತ ಪದ್ಮನಾಭನ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥಿಸಿ ಗೌರವ ವಿಶೇಷ ಪ್ರಸಾದ ನೀಡಿದರು. ಅನಂತ ಪದ್ಮನಾಭನ ಪ್ರಸಾದ ದರ್ಬಾರಿಗೆ ಕಳುಹಿಸುವುದಾಗಿ ತಿಳಿಸಿದರು. ಶ್ರೀಗಳವರು ಹನುಮಾನ್ ದೇವಸ್ಥಾನದಲ್ಲಿ ಸಂಸ್ಥಾನ ಪೂಜೆ ನಡೆಸಿ ಭಕ್ತರಿಗೆ ಗೀತಾ ಲೇಖನ ದೀಕ್ಷೆ ನೀಡಿ ಅನುಗ್ರಹಿಸಿದರು. ತಿರುವನಂತಪುರದ ರಾಜರಾದ ಆದಿತ್ಯವರ್ಮರಿಗೆ ವಿಶೇಷ ಪರ್ಯಾಯ ರಾಯಸ ಕಳಿಸಿದ್ದು, ದರ್ಬಾರು ಕಾರ್ಯಕ್ರಮದಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ.