ಮುಂಬಯಿ, ಫೆ.23: ಮಾಜಿ ಲೋಕಸಭಾ ಸ್ಪೀಕರ್ ಮನೋಹರ್ ಜೋಷಿ ಅವರು ಶುಕ್ರವಾರ ಮುಂಬೈನಲ್ಲಿರುವ ಹಿಂದೂಜಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಫೆಬ್ರವರಿ 21 ರಂದು ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ಹಿಂದೂಜಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಮನೋಹರ್ ಜೋಷಿ ಅವರು 1995 ರಿಂದ 1999 ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. 2002 ರಿಂದ 2004 ರವರೆಗೆ ಲೋಕಸಭೆಯ ಸ್ಪೀಕರ್ ಆಗಿಯೂ ಸೇವೆ ಸಲ್ಲಿಸಿದ್ದರು. 2006 ರಿಂದ 2012 ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ಶಿವಸೇನಾ ಸ್ಥಾಪಕ ಬಾಳಾಸಾಹೇಬ್ ಠಾಕ್ರೆಯವರ ಪರಮಾಪ್ತರಾಗಿ ಶಿವಸೇನೆಯಲ್ಲಿ ಮೇರು ವ್ಯಕ್ತಿತ್ವದ ನಾಯಕರಾಗಿದ್ದರು. ತನ್ನ ಶಿಸ್ತಿನ ನಡವಳಿಕೆಯ ಮೂಲಕ ಲೋಕಸಭೆಯಲ್ಲಿ ಅವರನ್ನು ಹೆಡ್ ಮಾಸ್ಟರ್ ಎಂದು ಸಂಸದರು ಕರೆಯುತ್ತಿದ್ದರು.
ಗಣ್ಯರ ಸಂತಾಪ: ಮನೋಹರ್ ಜೋಷಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮಾಜಿ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.