ಉಡುಪಿ, ನ.11: ಈಶಾನ್ಯ ರಾಜ್ಯಗಳ ನಿವೃತ್ತ ರಾಜ್ಯಪಾಲ ಪದ್ಮನಾಭ ಬಾಲಕೃಷ್ಣ ಆಚಾರ್ಯ ಮುಂಬಯಿಯ ನಿವಾಸದಲ್ಲಿ ಶುಕ್ರವಾರ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ಉಡುಪಿಯ ತೆಂಕಪೇಟೆಯಲ್ಲಿ 1931 ರಲ್ಲಿ ಜನಿಸಿದ್ದ ಆಚಾರ್ಯರು ತಮ್ಮ ಸರಳ ವ್ಯಕ್ತಿತ್ವದಿಂದ ಮಾದರಿಯಾಗಿದ್ದರು. ನಾಗಾಲ್ಯಾಂಡ್ ರಾಜ್ಯಪಾಲರಾಗಿದ್ದ ಅವರಿಗೆ ತ್ರಿಪುರಾ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರಗಳ ಹಂಗಾಮಿ ರಾಜ್ಯಪಾಲ ಜವಾಬ್ದಾರಿಯನ್ನು ನೀಡಲಾಗಿತ್ತು. ಉನ್ನತ ಸ್ಥಾನದಲ್ಲಿದ್ದ ಆಚಾರ್ಯರು ಕರಾವಳಿಯ ನಂಟನ್ನು ಮರೆಯಲಿಲ್ಲ.
ಕಲ್ಯಾಣಪುರಕ್ಕೆ ಭೇಟಿ: ನಾಗಾಲ್ಯಾಂಡ್ ರಾಜ್ಯಪಾಲರಾಗಿದ್ದ ಸಂದರ್ಭದಲ್ಲಿ ಪಿ.ಬಿ. ಆಚಾರ್ಯರು ಕಲ್ಯಾಣಪುರದ ಟಿಎಂಎ ಪೈ ಶಾಲೆಯ ಬಳಿಯಿರುವ ಕುಟುಂಬ ಸದಸ್ಯರ ಮನೆಗೆ ಬಂದಿದ್ದರು. ಮಾರ್ಗಮಧ್ಯದಲ್ಲಿ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಬಳಿಯಿರುವ ಬೇಕರಿಯೊಂದಕ್ಕೆ ಬಂದಿದ್ದ ಅವರು ನಾಗಾಲ್ಯಾಂಡ್ ರಾಜ್ಯಪಾಲರು ಎಂದು ಅಲ್ಲಿದ್ದ ಗ್ರಾಹಕರಿಗೆ ತಿಳಿದಿರಲಿಲ್ಲ. ಪತ್ನಿಯ ಜತೆ ಸಾಮಾನ್ಯರಂತೆ ತಿಂಡಿ ತಿನಿಸುಗಳನ್ನು ಖರೀದಿಸುತ್ತಿದ್ದ ಪಿ.ಬಿ.ಆಚಾರ್ಯ ಅವರನ್ನು ಸ್ಥಳೀಯರೊಬ್ಬರು ನೋಡಿ ನಮಸ್ಕರಿಸಿ ಇವರು ರಾಜ್ಯಪಾಲರು ಎಂದು ಅಲ್ಲಿದ್ದವರಿಗೆ ಹೇಳಿದಾಗ ಸುತ್ತಮುತ್ತಲಿನ ಜನರೆಲ್ಲರೂ ಅವರನ್ನು ನೋಡಲು ಆಗಮಿಸಿದಾಗ ಶುದ್ಧ ಕನ್ನಡದಲ್ಲೇ ಮಾತನಾಡಿದ ನೆನಪನ್ನು ಸ್ಥಳೀಯರು ಬಿಚ್ಚಿಡುತ್ತಾರೆ.
ಈಶಾನ್ಯ ರಾಜ್ಯದಲ್ಲಿ ಬಿಜೆಪಿಗೆ ಭದ್ರ ಬುನಾದಿ ಹಾಕಿದ ಆಚಾರ್ಯ: ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯನ್ನು ಬಲಪಡಿಸುವಲ್ಲಿ ಪಿ.ಬಿ. ಆಚಾರ್ಯರು ಪ್ರಮುಖ ಪಾತ್ರ ವಹಿಸಿದ್ದರು. ಬುಡಕಟ್ಟು ಸಂಸ್ಕೃತಿಗಳ ಬಗ್ಗೆ ಆಳವಾದ ಜ್ಞಾನವಿದ್ದ ಆಚಾರ್ಯರು, ಬುಡಕಟ್ಟು ಸಮಾಜದ ಶೈಕ್ಷಣಿಕೆ ಹಾಗೂ ಸಾಮಾಜಿಕ ಪ್ರಗತಿಗೆ ವಿಶೇಷ ಆದ್ಯತೆ ನೀಡಿದ್ದರು.
ಪ್ರಧಾನಿ ಸಂತಾಪ: ಪಿ.ಬಿ.ಆಚಾರ್ಯ ಜೀ ಅವರ ನಿಧನದಿಂದ ನೋವಾಗಿದೆ. ಅವರು ಸಮಾಜದ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ದೇಶಾದ್ಯಂತ ಬಿಜೆಪಿಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಈಶಾನ್ಯದಲ್ಲಿ ಅಭಿವೃದ್ಧಿಯನ್ನು ಮುಂದುವರಿಸಲು ಅವರು ಹೆಚ್ಚು ಬದ್ಧರಾಗಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.