ರುದ್ರಪ್ರಯಾಗ್, ಆ.12: ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ತರ್ಸಾಲಿಯಲ್ಲಿ ಭೂಕುಸಿತ ಸಂಭವಿಸಿದ್ದು, ಭೂಕುಸಿತದ ಅವಶೇಷಗಳ ಅಡಿಯಲ್ಲಿ ಕಾರು ಹೂತುಹೋದ ಪರಿಣಾಮ ಕನಿಷ್ಠ ಐದು ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ತರ್ಸಾಲಿಯಲ್ಲಿ ಬಂಡೆಗಳೊಂದಿಗೆ ಬೆಟ್ಟದಿಂದ ಭಾರಿ ಅವಶೇಷಗಳು ಬಿದ್ದಿದ್ದರಿಂದ ಕೇದಾರನಾಥ ಹೆದ್ದಾರಿಯ 60 ಮೀಟರ್ ಭಾಗ ಕುಸಿದಿದೆ. ಈ ಸಮಯದಲ್ಲಿ, ವಾಹನವೊಂದು ಅವಶೇಷಗಳ ಅಡಿಯಲ್ಲಿ ಹೂತುಹೋಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅವಶೇಷಗಳ ಅಡಿಯಲ್ಲಿ ಹೂತುಹೋದ ವಾಹನವೊಂದು ಶುಕ್ರವಾರ ಪತ್ತೆಯಾಗಿದ್ದು ಅದರೊಳಗಿದ್ದ ಐದು ಶವಗಳನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭೂಕುಸಿತದ ಪರಿಣಾಮ ಗುಪ್ತಕಾಶಿ-ಗೌರಿಕುಂಡ್ ಹೆದ್ದಾರಿಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸುಮಾರು 60 ಮೀಟರ್ ರಸ್ತೆ ಹಾನಿಗೊಳಗಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.
ರುದ್ರಪ್ರಯಾಗ್ ಸೇರಿದಂತೆ ಉತ್ತರಾಖಂಡದ ಅನೇಕ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಉತ್ತರಾಖಂಡದ ಹೆಚ್ಚಿನ ಜಿಲ್ಲೆಗಳಲ್ಲಿ ಆಗಸ್ಟ್ 14 ರವರೆಗೆ ಹವಾಮಾನ ಇಲಾಖೆ ‘ರೆಡ್’ ಅಲರ್ಟ್ ಘೋಷಿಸಲಾಗಿದೆ.