ನವದೆಹಲಿ, ನ.26: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಕುಸಿತ ಕಂಡಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ನಗರದ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 401 ರಷ್ಟಿತ್ತು. ಭಾನುವಾರದಂದು ಅಲ್ಪ ಸುಧಾರಣೆಯ ನಂತರ ದೆಹಲಿಯು ಎ.ಕ್ಯು.ಐ ಮಟ್ಟಗಳಲ್ಲಿ ಕ್ರಮೇಣ ಹೆಚ್ಚಳವಾಗಿದೆ. ನೆರೆಯ ಪ್ರದೇಶಗಳ ವಾಯು ಗುಣಮಟ್ಟ ಹೀಗಿದೆ- ಗಾಜಿಯಾಬಾದ್ (386), ಗುರುಗ್ರಾಮ್ (321), ಗ್ರೇಟರ್ ನೋಯ್ಡಾ (345), ನೋಯ್ಡಾ (344) ಮತ್ತು ಫರಿದಾಬಾದ್ (410)
ಸೊನ್ನೆ ಮತ್ತು 50 ರ ನಡುವಿನ ಎ.ಕ್ಯು.ಐ ಅನ್ನು ‘ಉತ್ತಮ’, 51 ಮತ್ತು 100 ‘ತೃಪ್ತಿದಾಯಕ’, 101 ಮತ್ತು 200 ‘ಮಧ್ಯಮ’, 201 ಮತ್ತು 300 ‘ಕಳಪೆ’, 301 ಮತ್ತು 400 ‘ಅತ್ಯಂತ ಕಳಪೆ’, 401 ಮತ್ತು 450 ‘ತೀವ್ರ’ ಎಂದು ಪರಿಗಣಿಸಲಾಗುತ್ತದೆ. ಪುಣೆ ಮೂಲದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟಿಯರಾಲಜಿ ಅಭಿವೃದ್ಧಿಪಡಿಸಿದ ಗಾಳಿಯ ಗುಣಮಟ್ಟದ ಮುಂಚಿನ ಎಚ್ಚರಿಕೆ ವ್ಯವಸ್ಥೆಯ ಪ್ರಕಾರ, ಮುಂದಿನ ಐದರಿಂದ ಆರು ದಿನಗಳಲ್ಲಿ ಮಾಲಿನ್ಯದ ಮಟ್ಟವು “ಅತ್ಯಂತ ಕಳಪೆ” ಮತ್ತು “ತೀವ್ರ” ವರ್ಗಗಳಲ್ಲಿ ದಾಖಲಾಗುವ ಸಾಧ್ಯತೆಯಿದೆ. ದೆಹಲಿ ಸರ್ಕಾರ ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಕಾನ್ಪುರದ ಜಂಟಿ ಯೋಜನೆಯ ದತ್ತಾಂಶವು ಗುರುವಾರ ರಾಜಧಾನಿಯ ವಾಯುಮಾಲಿನ್ಯದ ಸುಮಾರು 38 ಪ್ರತಿಶತದಷ್ಟು ವಾಹನಗಳ ಹೊರಸೂಸುವಿಕೆಯನ್ನು ಹೊಂದಿದೆ ಎಂದು ಬಹಿರಂಗಪಡಿಸಿದೆ.