ದಾಸೌ (ರಾಜಸ್ಥಾನ), ಫೆ.12: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯ 246 ಕಿಮೀ ಉದ್ದದ ದೆಹಲಿ – ದೌಸಾ – ಲಾಲ್ಸೋಟ್ ವಿಭಾಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. 5,940 ಕೋಟಿ ರೂ.ಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಿರುವ 247 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇಯ ಮೊದಲ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸುತ್ತಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಇದು ಅಭಿವೃದ್ಧಿ ಹೊಂದುತ್ತಿರುವ ಭಾರತದ ಭವ್ಯ ಚಿತ್ರಣವನ್ನು ಪ್ರಸ್ತುತಪಡಿಸುವ ವಿಶ್ವದ ಅತ್ಯಂತ ಸುಧಾರಿತ ಎಕ್ಸ್‌ಪ್ರೆಸ್‌ವೇಗಳಲ್ಲಿ ಒಂದಾಗಿದೆ.
ಇಂತಹ ಆಧುನಿಕ ರಸ್ತೆಗಳು, ರೈಲು ನಿಲ್ದಾಣಗಳು, ರೈಲು ಮಾರ್ಗಗಳು, ಮೆಟ್ರೋ ಮತ್ತು ವಿಮಾನ ನಿಲ್ದಾಣಗಳು ನಿರ್ಮಾಣವಾದಾಗ ದೇಶದ ಅಭಿವೃದ್ಧಿ ವೇಗ ಪಡೆಯುತ್ತದೆ. ಮೂಲಸೌಕರ್ಯದ ಮೇಲೆ ಹೂಡಿಕೆಯ ಪರಿಣಾಮವನ್ನು ವಿವರಿಸಿದ ಅವರು, ಕೇಂದ್ರ ಸರ್ಕಾರವು ಕಳೆದ 9 ವರ್ಷಗಳಿಂದ ನಿರಂತರವಾಗಿ ಮೂಲಸೌಕರ್ಯದಲ್ಲಿ ಭಾರಿ ಹೂಡಿಕೆಗಳನ್ನು ಮಾಡುತ್ತಿದೆ. ರಾಜಸ್ಥಾನದಲ್ಲಿ ಹೆದ್ದಾರಿಗಳ ನಿರ್ಮಾಣಕ್ಕಾಗಿ 50,000 ಕೋಟಿಗೂ ಹೆಚ್ಚು ಮೌಲ್ಯದ ಹೂಡಿಕೆಗಳನ್ನು ಮಾಡಲಾಗಿದೆ. ಈ ವರ್ಷದ ಬಜೆಟ್‌ನಲ್ಲಿ, ಮೂಲಸೌಕರ್ಯಕ್ಕಾಗಿ 2014 ರ ಹಂಚಿಕೆಗಿಂತ 5 ಪಟ್ಟು ಹೆಚ್ಚು ಅಂದರೆ, 10 ಲಕ್ಷ ಕೋಟಿ ರೂ.ಗಳ ಅನುದಾನ ಹಂಚಿಕೆಯಾಗಿದೆ. ರಾಜಸ್ಥಾನದ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಹೂಡಿಕೆಗಳಿಂದ ಹೆಚ್ಚಿನ ಲಾಭವಾಗಲಿದೆ. ಆರ್ಥಿಕತೆಯ ಮೇಲೆ ಮೂಲಸೌಕರ್ಯದಲ್ಲಿನ ಹೂಡಿಕೆಯ ಪ್ರಯೋಜನಗಳನ್ನು ಒತ್ತಿಹೇಳಿದ ಪ್ರಧಾನಿಯವರು, ಇದು ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಹೇಳಿದರು.
ಮೂಲಸೌಕರ್ಯದಿಂದ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತಿದೆ. ದೆಹಲಿ – ದೌಸಾ – ಲಾಲ್ಸೋಟ್ ಹೆದ್ದಾರಿ ನಿರ್ಮಾಣದಿಂದ ದೆಹಲಿ ಮತ್ತು ಜೈಪುರ ನಡುವಿನ ಪ್ರಯಾಣದ ಸಮಯ ಕಡಿಮೆಯಾಗುತ್ತದೆ. ಸ್ಥಳೀಯ ರೈತರು ಮತ್ತು ಕುಶಲಕರ್ಮಿಗಳಿಗೆ ಅನುಕೂಲವಾಗುವ ಎಕ್ಸ್‌ಪ್ರೆಸ್‌ವೇ ಗ್ರಾಮೀಣ ಹಾತ್‌ಗಳನ್ನು ಸ್ಥಾಪಿಸಲಾಗುತ್ತಿದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ದೆಹಲಿ, ಹರಿಯಾಣ, ಗುಜರಾತ್ ಮತ್ತು ಮಹಾರಾಷ್ಟ್ರದ ಹಲವು ಪ್ರದೇಶಗಳೊಂದಿಗೆ ರಾಜಸ್ಥಾನಕ್ಕೂ ಪ್ರಯೋಜನವನ್ನು ನೀಡುತ್ತದೆ. ಸರಿಸ್ಕಾ, ಕೇವಲಾದೇವ್ ರಾಷ್ಟ್ರೀಯ ಉದ್ಯಾನವನ, ರಣಥಂಬೋರ್ ಮತ್ತು ಜೈಪುರದಂತಹ ಪ್ರವಾಸಿ ತಾಣಗಳು ಹೆದ್ದಾರಿಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತವೆ ಎಂದು ಅವರು ಹೇಳಿದರು.
ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇ ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್‌ಪ್ಲಾನ್‌ನಿಂದ ಚಾಲಿತವಾಗಿದೆ ಎಂದು ತಿಳಿಸಿದ ಪ್ರಧಾನಿ, ಆಪ್ಟಿಕಲ್ ಫೈಬರ್, ವಿದ್ಯುತ್ ಮಾರ್ಗಗಳು ಮತ್ತು ಗ್ಯಾಸ್ ಪೈಪ್‌ಲೈನ್‌ಗಳನ್ನು ಹಾಕಲು ವ್ಯವಸ್ಥೆ ಮಾಡಲಾಗಿದೆ ಮತ್ತು ಉಳಿದ ಭೂಮಿಯನ್ನು ಸೌರಶಕ್ತಿ ಉತ್ಪಾದನೆ ಮತ್ತು ಗೋದಾಮುಗಳಿಗಾಗಿ ಬಳಸಲಾಗುವುದು. ಈ ಪ್ರಯತ್ನಗಳು ಭವಿಷ್ಯದಲ್ಲಿ ರಾಷ್ಟ್ರಕ್ಕೆ ಬಹಳಷ್ಟು ಹಣವನ್ನು ಉಳಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು.
ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಹಾಯಕ ಸಚಿವ ಕೈಲಾಶ್ ಚೌಧರಿ, ರಾಜಸ್ಥಾನ ಸರ್ಕಾರದ ಲೋಕೋಪಯೋಗಿ ಸಚಿವ ಭಜನ್ ಲಾಲ್ ಜಾಟವ್ ಮತ್ತು ಸಂಸದರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿನ್ನೆಲೆ: ದೆಹಲಿ ಮುಂಬೈ ಎಕ್ಸ್‌ಪ್ರೆಸ್‌ವೇಯ 246 ಕಿಮೀ ದೆಹಲಿ – ದೌಸಾ – ಲಾಲ್ಸೋಟ್ ವಿಭಾಗವನ್ನು 12,150 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ವಿಭಾಗವನ್ನು ಸಂಚಾರಕ್ಕೆ ಮುಕ್ತಗೊಳಿಸಿರುವುದರಿಂದ ದೆಹಲಿಯಿಂದ ಜೈಪುರಕ್ಕೆ ಪ್ರಯಾಣದ ಸಮಯ 5 ಗಂಟೆಗಳಿಂದ ಸುಮಾರು 3.5 ಗಂಟೆಗಳವರೆಗೆ ಕಡಿಮೆಯಾಗುತ್ತದೆ ಮತ್ತು ಇಡೀ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಇದು ಪ್ರಮುಖ ಉತ್ತೇಜನವನ್ನು ನೀಡುತ್ತದೆ. ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ 1,386 ಕಿಮೀ ಉದ್ದದ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿರುತ್ತದೆ. ಇದು ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣದ ದೂರವನ್ನು 1,424 ಕಿಮೀ ನಿಂದ 1,242 ಕಿಮೀಗೆ ಅಂದರೆ, ಶೇ.12 ರಷ್ಟು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯವನ್ನು 24 ಗಂಟೆಗಳಿಂದ 12 ಗಂಟೆಗಳಿಗೆ ಅಂದರೆ ಶೇ.50 ರಷ್ಟು ಕಡಿಮೆ ಮಾಡುತ್ತದೆ.
ಇದು ಆರು ರಾಜ್ಯಗಳಲ್ಲಿ ಅಂದರೆ, ದೆಹಲಿ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರದ ಮೂಲಕ ಹಾದು ಹೋಗುತ್ತದೆ ಮತ್ತು ಕೋಟಾ, ಇಂದೋರ್, ಜೈಪುರ, ಭೋಪಾಲ್, ವಡೋದರಾ ಮತ್ತು ಸೂರತ್‌ನಂತಹ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತದೆ. ಎಕ್ಸ್‌ಪ್ರೆಸ್‌ವೇಯು 93 ಪಿಎಂ ಗತಿ ಶಕ್ತಿ ಆರ್ಥಿಕ ಪ್ರದೇಶಗಳು, 13 ಬಂದರುಗಳು, 8 ಪ್ರಮುಖ ವಿಮಾನ ನಿಲ್ದಾಣಗಳು ಮತ್ತು 8 ಬಹು-ಮಾದರಿ ಲಾಜಿಸ್ಟಿಕ್ಸ್ ಪಾರ್ಕ್‌ಗಳ ಜೊತೆಗೆ ಮುಂಬರುವ ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳಾದ ಜೆವಾರ್ ವಿಮಾನ ನಿಲ್ದಾಣ, ನವಿ ಮುಂಬೈ ವಿಮಾನ ನಿಲ್ದಾಣ ಮತ್ತು ಜೆ ಎನ್ ಪಿ ಟಿ ಬಂದರುಗಳಿಗೆ ಸಹ ಸೇವೆ ಕಲ್ಪಿಸುತ್ತದೆ.