ನವದೆಹಲಿ, ಏ.5: ದೇಶಾದ್ಯಂತ ಕನಿಷ್ಠ ವೇತನ ದಿನಕ್ಕೆ 400, ಪ್ರತಿ ಬಡ ಕುಟುಂಬಕ್ಕೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ, ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ 50 ಸೀಟುಗಳ ಮೀಸಲಾತಿ, ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಮತ್ತು ರಾಷ್ಟ್ರೀಯ ಜಾತಿ ಗಣತಿ ಕಾಂಗ್ರೆಸ್ ಪ್ರಣಾಳಿಕೆಯ ಪ್ರಮುಖ ಮುಖ್ಯಾಂಶಗಳು. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಶುಕ್ರವಾರ ನವದೆಹಲಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ವಿವಿಧ ಹಂತಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಸುಮಾರು 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಯನ್ನು ಪಕ್ಷವು ನೀಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಖರ್ಗೆ, ತಮ್ಮ ಪಕ್ಷದ ಪ್ರಣಾಳಿಕೆಯು ಪಂಚ ನ್ಯಾಯ (ನ್ಯಾಯದ ಐದು ಸ್ತಂಭಗಳು) ಆಧರಿಸಿದೆ. ಅವು ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರಿಗೆ ನ್ಯಾಯ ಮತ್ತು ಜನಸಂಖ್ಯೆಯ ಶೇಕಡಾವಾರು ಪ್ರಕಾರ ಅವಕಾಶಗಳಲ್ಲಿ ನ್ಯಾಯ. ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, ಈ ಬಾರಿಯ ಲೋಕಸಭೆ ಚುನಾವಣೆಯು ಮಾಧ್ಯಮಗಳು ಪ್ರಚಾರ ಮಾಡುವುದಕ್ಕಿಂತ ಹೆಚ್ಚು ನಿಕಟ ಸ್ಪರ್ಧೆಯಾಗಲಿದೆ ಮತ್ತು ಪ್ರತಿಪಕ್ಷಗಳು ಗೆಲ್ಲುತ್ತವೆ ಎಂದು ಹೇಳಿದ್ದಾರೆ. ಆಡಳಿತಾರೂಢ ಬಿಜೆಪಿ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಮತ್ತು ಕೇಂದ್ರೀಯ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.