ಭೋಪಾಲ್, ಡಿ.11: ಉಜ್ಜಯಿನಿ ದಕ್ಷಿಣದ ಬಿಜೆಪಿ ಶಾಸಕ ಡಾ.ಮೋಹನ್ ಯಾದವ್ ಅವರು ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ಕೇಂದ್ರದ ವೀಕ್ಷಕರ ಸಮ್ಮುಖದಲ್ಲಿ ಸೋಮವಾರ ಸಂಜೆ ಭೋಪಾಲ್‌ನಲ್ಲಿ ನಡೆದ ಸಭೆಯಲ್ಲಿ ಒಬಿಸಿ ನಾಯಕ ಯಾದವ್ (58) ಅವರನ್ನು ಮಧ್ಯಪ್ರದೇಶದ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ನಿಕಟಪೂರ್ವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಯಾದವ್ ಸೇವೆ ಸಲ್ಲಿಸುತ್ತಿದ್ದರು. ಪಕ್ಷದ ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ನಿರ್ಗಮಿತ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಉಜ್ಜಯಿನಿ ದಕ್ಷಿಣದ ಬಿಜೆಪಿ ಶಾಸಕ ಯಾದವ್ ಅವರ ಹೆಸರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಸ್ತಾಪಿಸಿದರು.
ಮುಖ್ಯಮಂತ್ರಿ ಹುದ್ದೆಯ ಸ್ಪರ್ಧಿಗಳ ನಡುವೆ ಡಾ.ಮೋಹನ್ ಯಾದವ್ ಅವರ ಹೆಸರೇ ಇರಲಿಲ್ಲ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿನ್ನಲೆ ಮತ್ತು ಮೂರು ಬಾರಿ ಶಾಸಕರಾಗಿರುವ ಡಾ. ಮೋಹನ್ ಯಾದವ್ ಒಬಿಸಿ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ತೋಮರ್, ಪಟೇಲ್ ಮತ್ತು ವಿಜಯವರ್ಗಿಯ ಹೆಸರುಗಳೂ ಕೇಳಿಬರುತ್ತಿತ್ತು. 230 ಸದಸ್ಯ ಬಲದ ವಿಧಾನಸಭೆಯಲ್ಲಿ 163 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಕಾಂಗ್ರೆಸ್ 66 ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 2005, 2008, 2013 ಮತ್ತು 2020 ರಲ್ಲಿ ನಾಲ್ಕು ಬಾರಿ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್ (64) ನಂತರ ಯಾದವ್ ಮುಖ್ಯಮಂತ್ರಿಯಾಗಲಿದ್ದಾರೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಾರ್ಚ್ 25, 1965 ರಂದು ಜನಿಸಿದ ಮೋಹನ್ ಯಾದವ್ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ನಲ್ಲಿ ಸಕ್ರಿಯರಾಗಿದ್ದರು. ಮೋಹನ್ ಯಾದವ್ ಅವರು ಬಿ.ಎಸ್.ಸಿ, ಎಲ್.ಎಲ್.ಬಿ., ಎಂ.ಎ. ರಾಜ್ಯಶಾಸ್ತ್ರ ಅಧ್ಯಯನ ಮಾಡಿದ್ದು, ಪಿ.ಎಚ್.ಡಿ ಪದವಿ ಪಡೆದಿದ್ದಾರೆ.