ನವದೆಹಲಿ, ಡಿ.3: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ವಿಧಾನಸಭಾ ಚುನಾವಣೆಗಳ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಐತಿಹಾಸಿಕ ಗೆಲುವನ್ನು ದಾಖಲಿಸಿದೆ. ಫಲಿತಾಂಶದ ನಂತರ ಬಿಜೆಪಿಯ ರಾಷ್ಟ್ರೀಯ ಕಛೇರಿಯಲ್ಲಿ ಕಿಕ್ಕಿರಿದು ನೆರೆದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ಮಾರ್ಗವನ್ನು ಸರಿಪಡಿಸಿಕೊಳ್ಳಿ ಇಲ್ಲದಿದ್ದರೆ ಸಾರ್ವಜನಿಕರು ನಿಮ್ಮನ್ನು ಹೊರಹಾಕುತ್ತಾರೆ ಎಂದು ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಿದರು. ಇಂದಿನ ಫಲಿತಾಂಶ 2024 ರಲ್ಲಿ ಬಿಜೆಪಿ ಹ್ಯಾಟ್ರಿಕ್ ಗ್ಯಾರಂಟಿ ಎಂಬ ಪೂರಕ ವಾತಾವರಣ ನಿರ್ಮಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಇಂದಿನ ಗೆಲುವು ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಭಾವನಾ (ಎಲ್ಲರೊಂದಿಗೆ ಅಭಿವೃದ್ಧಿಯ ಭಾವನೆ, ಎಲ್ಲರಿಗೂ ಅಭಿವೃದ್ಧಿ) ಗೆದ್ದಿದೆ. ಅಭಿವೃದ್ಧಿ ಹೊಂದಿದ ಭಾರತದ ಕರೆ ಗೆದ್ದಿದೆ. ತುಳಿತಕ್ಕೊಳಗಾದವರ ಧ್ವನಿ ಗೆದ್ದಿದೆ. ಪ್ರಾಮಾಣಿಕತೆ ಮತ್ತು ಉತ್ತಮ ಆಡಳಿತ ಗೆದ್ದಿದೆ ಎಂದು ಪ್ರಧಾನಿ ಹೇಳಿದರು. ಈ ಹ್ಯಾಟ್ರಿಕ್, 2024ರ ಗೆಲುವನ್ನು ಖಾತ್ರಿಪಡಿಸಿದೆ. ಭ್ರಷ್ಟಾಚಾರ, ತುಷ್ಟೀಕರಣ ರಾಜಕಾರಣದ ಬಗ್ಗೆ ಜನರು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದಾರೆ ಎಂಬುದನ್ನು ಇಂದಿನ ಜನಾದೇಶ ಸಾಬೀತುಪಡಿಸಿದೆ ಎಂದರು.
ಇಂದಿನ ಫಲಿತಾಂಶವು ಪ್ರಗತಿಯ ವಿರುದ್ಧ ಇರುವ ಶಕ್ತಿಗಳಿಗೆ ಎಚ್ಚರಿಕೆಯಾಗಿದೆ. ಇದು ಕಾಂಗ್ರೆಸ್ ಮತ್ತು ಅವರ ಘಮಂಡಿಯ (ಅಹಂಕಾರಿ) ಮೈತ್ರಿಗೆ ದೊಡ್ಡ ಪಾಠವಾಗಿದೆ. ಮಧ್ಯಪ್ರದೇಶ, ರಾಜಸ್ಥಾನ, ಮತ್ತು ಛತ್ತೀಸ್‌ಗಢದ ಜನರು ಬಿಜೆಪಿಯ ಮೇಲೆ ಪ್ರೀತಿಯ ಸುರಿಮಳೆಗೈದಿದ್ದಾರೆ. ತೆಲಂಗಾಣದಲ್ಲಿಯೂ ಸಹ ಬಿಜೆಪಿಗೆ ಜನರ ಬೆಂಬಲ ನಿರಂತರವಾಗಿ ಹೆಚ್ಚುತ್ತಿದೆ ಎಂದರು.
ಫಲಿತಾಂಶ ವಿವರ: ಛತ್ತೀಸ್‌ಗಢ: (ಬಹುಮತಕ್ಕೆ 46) ಬಿಜೆಪಿ- 54, ಕಾಂಗ್ರೆಸ್-35, ಇತರರು-1. ರಾಜಸ್ಥಾನ: (ಬಹುಮತಕ್ಕೆ 101) ಬಿಜೆಪಿ- 115, ಕಾಂಗ್ರೆಸ್- 69, ಇತರರು-15. ಮಧ್ಯಪ್ರದೇಶ: (ಬಹುಮತಕ್ಕೆ 116) ಬಿಜೆಪಿ- 164, ಕಾಂಗ್ರೆಸ್ 65, ಇತರರು-1. ತೆಲಂಗಾಣ: (ಬಹುಮತಕ್ಕೆ 60) ಕಾಂಗ್ರೆಸ್- 64, ಬಿ.ಆರ್.ಎಸ್- 39, ಬಿಜೆಪಿ-8, ಇತರರು-7