ಗಾಂಧಿನಗರ: ಘಟ್ಲೊದಿಯಾ ವಿಧಾನಸಭಾ ಕ್ಷೇತ್ರದ ಶಾಸಕ ಭೂಪೇಂದ್ರ ಪಟೇಲ್ ಗುಜರಾತ್ ನೂತನ ಮುಖ್ಯಮಂತ್ರಿ. ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಚ್ಚರಿಯ ಆಯ್ಕೆಯಾಗಿ ಭೂಪೇಂದ್ರ ಪಟೇಲ್ ಹೆಸರು ಅಂತಿಮವಾಗಿದ್ದು ಅವರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಗುಜರಾತ್ ಉಸ್ತುವಾರಿಯಾಗಿರುವ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಸುದ್ಧಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದ್ದಾರೆ.
ಶನಿವಾರ ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾನಿ ದಿಢೀರನೆ ರಾಜೀನಾಮೆ ನೀಡಿದ್ದರು. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲಾಗಿದೆ ಎಂದು ಬಿಜೆಪಿ ಹೇಳಿದ್ದು 2022ರಲ್ಲಿ ಗುಜರಾತ್ ಚುನಾವಣೆ ನಡೆಯಲಿದೆ.
ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ 2017 ಚುನಾವಣೆಯಲ್ಲಿ ಘಟ್ಲೊದಿಯಾ ವಿಧಾನಸಭಾ ಕ್ಷೇತ್ರದಿಂದ 1,17,000 ಮತಗಳ ಅಂತರದಲ್ಲಿ ದಾಖಲೆಯ ಗೆಲುವು ಸಾಧಿಸಿದ್ದರು.
ಮೊದಲ ಬಾರಿ ಶಾಸಕ, ಇದೀಗ ಸಿಎಂ ಆಗಿ ಆಯ್ಕೆಯಾದ ಭೂಪೇಂದ್ರ ಪಟೇಲ್ ಅವರು ಶಾಸಕರಾಗಿ ಆಯ್ಕೆಯಾಗುವ ಮೊದಲು ಸ್ಥಳೀಯಾಡಳಿತ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಅಹಮದಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಭೂಪೇಂದ್ರ ಪಟೇಲ್ ಶುದ್ಧಹಸ್ತ ರಾಜಕಾರಣಿ ಎಂಬ ಇಮೇಜ್ ಗಳಿಸಿದ್ದು ಅವರ ಆಯ್ಕೆಗೆ ಇಂಧನವಾಗಿ ಪರಿಣಮಿಸಿತು.