ಬೆಂಗಳೂರು, ಫೆ. 13: ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಸೋಮವಾರ ಏರೋ ಇಂಡಿಯಾ 2023 ವೈಮಾನಿಕ ಪ್ರದರ್ಶನದ 14 ನೇ ಆವೃತ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬೆಂಗಳೂರಿನ ಆಗಸವು ನವಭಾರತದ ಸಾಮರ್ಥ್ಯಗಳಿಗೆ ಸಾಕ್ಷಿಯಾಗಿದೆ. ಈ ಹೊಸ ಎತ್ತರವೇ ನವ ಭಾರತದ ವಾಸ್ತವವಾಗಿದೆ. ದೇಶವನ್ನು ಬಲಪಡಿಸಲು ಕರ್ನಾಟಕದ ಯುವಜನತೆ ತಮ್ಮ ತಾಂತ್ರಿಕ ಪರಿಣತಿಯನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸಬೇಕು. ಹೊಸ ಚಿಂತನೆ, ಹೊಸ ವಿಧಾನದೊಂದಿಗೆ ದೇಶವು ಮುನ್ನಡೆದರೆ, ಅದರ ವ್ಯವಸ್ಥೆಗಳು ಹೊಸ ಚಿಂತನೆಗೆ ಅನುಗುಣವಾಗಿ ಬದಲಾಗಲು ಆರಂಭಿಸುತ್ತವೆ.
ಇಂದು, ಏರೋ ಇಂಡಿಯಾ ಕೇವಲ ಪ್ರದರ್ಶನ ಮಾತ್ರವಲ್ಲ, ಇದು ರಕ್ಷಣಾ ಉದ್ಯಮದ ವ್ಯಾಪ್ತಿಯನ್ನು ಮಾತ್ರವಲ್ಲದೆ ಭಾರತದ ಆತ್ಮವಿಶ್ವಾಸವನ್ನು ಪ್ರದರ್ಶಿಸುತ್ತದೆ. ಈ ಹೊಸ ಎತ್ತರವು ನವಭಾರತದ ವಾಸ್ತವವಾಗಿದೆ, ಏರೋ ಇಂಡಿಯಾ 2023 ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳಿಗೆ ಉಜ್ವಲ ಉದಾಹರಣೆಯಾಗಿದೆ ಮತ್ತು ಈ ಸಮಾರಂಭದಲ್ಲಿ 100 ಕ್ಕೂ ಹೆಚ್ಚು ರಾಷ್ಟ್ರಗಳ ಉಪಸ್ಥಿತಿಯು ಇಡೀ ಜಗತ್ತು ಭಾರತದ ಮೇಲೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ವಿಶ್ವದ ಪ್ರಸಿದ್ಧ ಕಂಪನಿಗಳೊಂದಿಗೆ ಭಾರತದ ಎಂಎಸ್‌ಎಂಇಗಳು ಮತ್ತು ಸ್ಟಾರ್ಟ್‌ಅಪ್‌ಗಳು ಸೇರಿದಂತೆ 700 ಕ್ಕೂ ಹೆಚ್ಚು ಪ್ರದರ್ಶಕರ ಭಾಗವಹಿಸುವಿಕೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. ಏರೋ ಇಂಡಿಯಾ 2023 ರ ಘೋಷವಾಕ್ಯವಾದ ‘ಕೋಟ್ಯಂತರ ಅವಕಾಶಗಳಿಗೆ ರನ್ ವೇ’ ಎಂಬ ವಿಷಯದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿ, ಆತ್ಮನಿರ್ಭರ ಭಾರತದ ಶಕ್ತಿಯು ಪ್ರತಿದಿನವೂ ಹೆಚ್ಚುತ್ತಲೇ ಇದೆ ಎಂದರು.
ಪ್ರದರ್ಶನದ ಜೊತೆಗೆ ಆಯೋಜಿಸಲಾಗುತ್ತಿರುವ ರಕ್ಷಣಾ ಸಚಿವರ ಸಮ್ಮೇಳನ ಮತ್ತು ಸಿಇಒ ದುಂಡುಮೇಜಿನ ಸಭೆಗಳ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಈ ವಲಯದಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಏರೋ ಇಂಡಿಯಾದ ಸಾಮರ್ಥ್ಯ ಹೆಚ್ಚಾಗುತ್ತದೆ. ಭಾರತದ ತಾಂತ್ರಿಕ ಪ್ರಗತಿಯ ಕೇಂದ್ರವಾಗಿರುವ ಕರ್ನಾಟಕದಲ್ಲಿ ನಡೆಯುತ್ತಿರುವ ಏರೋ ಇಂಡಿಯಾದ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಇದರಿಂದ ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕದ ಯುವಜನತೆಗೆ ಹೊಸ ದಾರಿಗಳು ತೆರೆದುಕೊಳ್ಳಲಿವೆ ಎಂದರು.
ತೇಜಸ್, ಐಎನ್‌ಎಸ್ ವಿಕ್ರಾಂತ್, ಸೂರತ್ ಮತ್ತು ತುಮಕೂರಿನ ಸುಧಾರಿತ ತಯಾರಿಕಾ ಘಟಕಗಳು ಆತ್ಮನಿರ್ಭರ ಭಾರತದ ಸಾಮರ್ಥ್ಯವಾಗಿದ್ದು, ಅದರೊಂದಿಗೆ ವಿಶ್ವದ ಹೊಸ ಪರ್ಯಾಯಗಳು ಮತ್ತು ಅವಕಾಶಗಳನ್ನು ಜೋಡಿಸಲಾಗಿದೆ ಎಂದು ಪ್ರಧಾನಿ ಹೇಳಿದರು. 21ನೇ ಶತಮಾನದ ನವಭಾರತವು ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಅಥವಾ ಅದರ ಯಾವುದೇ ಪ್ರಯತ್ನದಲ್ಲೂ ಕೊರತೆ ಕಾಣುವುದಿಲ್ಲ ಎಂದು ಪ್ರಧಾನಿ ಹೇಳಿದರು.
ಸುಧಾರಣೆಗಳ ಸಹಾಯದಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಕ್ರಾಂತಿಯನ್ನು ತರಲಾಗಿದೆ. ದಶಕಗಳಿಂದ ಅತಿದೊಡ್ಡ ರಕ್ಷಣಾ ಆಮದುದಾರನಾಗಿದ್ದ ರಾಷ್ಟ್ರವು ಈಗ ವಿಶ್ವದ 75 ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ. ಕಳೆದ 8-9 ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದ ಪರಿವರ್ತನೆಯನ್ನು ಉಲ್ಲೇಖಿಸಿದ ಪ್ರಧಾನಿಯವರು, 2024-25ರ ವೇಳೆಗೆ ರಕ್ಷಣಾ ರಫ್ತುಗಳನ್ನು 1.5 ಶತಕೋಟಿಯಿಂದ 5 ಶತಕೋಟಿಗೆ ಕೊಂಡೊಯ್ಯುವ ಗುರಿ ಇದೆ ಎಂದು ಹೇಳಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಉಪಸ್ಥಿತರಿದ್ದರು.
ಏರೋ ಇಂಡಿಯಾ 2023 ರಲ್ಲಿ ಏರ್‌ಬಸ್, ಬೋಯಿಂಗ್, ಡಸಾಲ್ಟ್ ಏವಿಯೇಷನ್, ಲಾಕ್‌ಹೀಡ್ ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಉದ್ಯಮ, ಬ್ರಹ್ಮೋಸ್ ಏರೋಸ್ಪೇಸ್, ಆರ್ಮಿ ಏವಿಯೇಷನ್, ಎಚ್‌ಸಿ ರೊಬೊಟಿಕ್ಸ್, ಎಸ್‌ಎಬಿ, ಸಫ್ರಾನ್, ರೋಲ್ಸ್ ರಾಯ್ಸ್, ಲಾರ್ಸೆನ್ ಮತ್ತು ಟೌಬ್ರೊ, ಭಾರತ್ ಫೋರ್ಜ್ ಲಿಮಿಟೆಡ್, ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ ಎ ಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿ ಇ ಎಲ್), ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿ ಡಿ ಎಲ್) ಮತ್ತು ಬಿಇಎಂಎಲ್ ಲಿಮಿಟೆಡ್ ಭಾಗವಹಿಸಿದ ಪ್ರಮುಖ ಕಂಪನಿಗಳಾಗಿವೆ.