ಬೆಂಗಳೂರು, ಏ.27: ಸಾಧನಾ ಯೋಜನೆಯಲ್ಲಿ ಉಚಿತ ಪದವಿಪೂರ್ವ ಹಾಗೂ ನೀಟ್ ಕೋಚಿಂಗ್ ಪಡೆದುಕೊಳ್ಳಲು ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ಇಲ್ಲಿನ ಸಾಧನಾ ಕ್ಯಾಂಪಸ್, ಥಣಿಸಂದ್ರದಲ್ಲಿ ವಿದ್ಯಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 2024-26ರ ಸಾಧನಾದ 8ನೇ ಬ್ಯಾಚಿನ ಅಂತಿಮ ಆಯ್ಕೆ ಶಿಬಿರದಲ್ಲಿ 270 ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದು, ಅಂತಿಮವಾಗಿ 64 ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಸಮಾರಂಭದಲ್ಲಿ ಬಿ.ಎ.ಎಸ್.ಇ ಇದರ ಸಿಇಒ ಅನಂತ ಕುಲಕರ್ಣಿ, ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿ್ ನಾ. ದಿನೇಶ್ ಹೆಗ್ಡೆ ಹಾಗೂ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಅರ್ಕಾವತಿಯ ಪ್ರಧಾನಾಚಾರ್ಯೆ ಮಂಜುಳಾ ಉಪಸ್ಥಿತರಿದ್ದರು.
ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಭಾರತೀಯ ಸಂಸ್ಕಾರದೊಟ್ಟಿಗೆ ಪಿಯು ಶಿಕ್ಷಣ, ನೀಟ್ ಹಾಗೂ ಸಿಇಟಿ ಕೋಚಿಂಗನ್ನು ಉಚಿತವಾಗಿ ಕೊಡುವ ಸಲುವಾಗಿ, ಬಿ.ಎ.ಎಸ್.ಇ ಇನ್ಸ್ಟಿಟ್ಯೂಟ್ ನ ಶೈಕ್ಷಣಿಕ ಸಹಕಾರದೊಂದಿಗೆ ರಾಷ್ಟ್ರೋತ್ಥಾನವು ಸಾಧನಾ ಯೋಜನೆಯನ್ನು 2017ರಲ್ಲಿ ಪ್ರಾರಂಭಿಸಿತು. ಇದಕ್ಕೂ ಮುನ್ನ ಕಳೆದ ಡಿಸೆಂಬರ್ 25 ಹಾಗೂ ಜನವರಿ 21ರಂದು ಎರಡು ಹಂತದ ಪ್ರವೇಶ ಪರೀಕ್ಷೆಗಳನ್ನು ನಡೆಸಲಾಯಿತು. ಸಾಧನಾದಲ್ಲಿ ಇಲ್ಲಿಯವರೆವಿಗೂ 246 ವಿದ್ಯಾರ್ಥಿನಿಯರು ಉಚಿತ ಶಿಕ್ಷಣ ಪಡೆದಿದ್ದು, 58 ವಿದ್ಯಾರ್ಥಿನಿಯರು ಎಂ.ಬಿ.ಬಿ.ಎಸ್. ಮೆರಿಟ್ ಸೀಟನ್ನು ಪಡೆದಿರುತ್ತಾರೆ.